ಮಂಗಳೂರು: ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಅನಾಮಧೇಯ ಕರೆಯೊಂದು ಬಂದಿದ್ದು, ಆಸ್ಪತ್ರೆಯ ಆಡಳಿತಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರೀಯದಳ ಹಾಗೂ ಪೊಲೀಸರು ತೆರಳಿ ಪರಿಶೀಲಿಸಿದಾಗ ಹುಸಿ ಬಾಂಬ್ ಕರೆ ಎಂದು ತಿಳಿಸಿ ಘಟನೆ ಬುಧವಾರ ನಡೆದಿದೆ.
ಬುಧವಾರ ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆಯ ಹೆರಿಗೆ ವಿಭಾಗದ ಸ್ಥಿರ ದೂರವಾಣಿಗೆ ಕರೆಯೊಂದು ಬಂದಿದೆ. ಪಿಜಿ ವಿದ್ಯಾರ್ಥಿನಿ ಕರೆ ಸ್ವೀಕರಿಸಿದ್ದು ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬು ಸ್ಪೋಟಿಸುವುದಾಗಿ ಹೇಳಿ ಎಲ್ಲರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕವೂ ನಾಲ್ಕೈದು ಬಾರಿ ಕರೆ ಬಂದಿದ್ದು ಬ್ಯಾರಿ ಭಾಷೆಯಲ್ಲೂ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೊಬೈಲ್ ನಂಬರ್ ಪರಿಶೀಲಿಸಿ ಆರೋಪಿಗಳನ್ನು ಶ್ರೀಘ್ರದಲ್ಲಿ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.