ಸೆರೆಯಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಳ ಸ್ನೇಹಿತ
ನವದೆಹಲಿ: ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿ ಸೆರೆಯಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಳ ಸ್ನೇಹಿತನನ್ನು ಕೂಡ ಪೊಲೀಸರು ಇಂದು ಇದೇ ಆರೋಪದಲ್ಲಿ ಬಂಧಿಸಿದ್ದಾರೆ. ಈತನೂ ಯೂಟ್ಯೂಬರ್ ಆಗಿದ್ದಾನೆ ಮತ್ತು ಜ್ಯೋತಿ ಮಲ್ಹೋತ್ರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
11 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಜಾನ್ ಮಹಲ್ ಎಂಬ ಯೂ ಟ್ಯೂಬ್ ಚಾನೆಲ್ ನಡೆಸುತ್ತಿರುವ ಜಸ್ಬೀರ್ ಸಿಂಗ್ ಸೆರೆಯಾಗಿರುವ ಯೂಟ್ಯೂಬರ್. ಗೂಢಚಾರಿಕೆಗೆ ಸಂಬಂಧಿಸಿ ಸೆರೆಯಾಗಿರುವ ಎರಡನೇ ಯೂಟ್ಯೂಬರ್ ಈತ. ಗೂಢಚಾರಿಕೆಗೆ ಸಂಬಂಧಿಸಿದಂತೆ ಸುಮಾರು 20 ಮಂದಿಯನ್ನು ದೇಶದ ವಿವಿಧೆಡೆಯಿಂದ ಈಗಾಗಲೇ ಬಂಧಿಸಲಾಗಿದೆ.
ಪಾಕಿಸ್ಥಾನದ ಐಎಸ್‌ಐ ಏಜೆಂಟ್ ಶಕೀರ್ ಅಲಿಯಾಸ್ ಜಟ್ ರಣಧಾವ ಎಂಬಾತನ ಜೊತೆಗೆ ಜಸ್ಬೀರ್ ಸಿಂಗ್ ನಿರಂತರ ಸಂಪರ್ಕದಲ್ಲಿದ್ದ. ಪಾಕ್ ಹೈಕಮಿಷನ್‌ನ ಮಾಜಿ ಸಿಬ್ಬಂದಿ ಡ್ಯಾನಿಶ್ ಅಲಿಯಾಸ್ ಎಹ್ಸಾನ್ ಉರ್ ರಹಿಮಾನ್ ಜೊತೆಗೂ ಜಸ್ಬೀರ್ ಸಿಂಗ್‌ಗೆ ಸಂಪರ್ಕ ಇತ್ತು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಡ್ಯಾನಿಶ್‌ನ ಆಹ್ವಾನದ ಮೇರೆಗೆ ಪಾಕಿಸ್ಥಾನಕ್ಕೆ ಹೋಗಿದ್ದ, ಹಾಗೂ ಪಾಕಿಸ್ಥಾನದ ದೂತವಾಸದಲ್ಲಿ ಜರುಗಿದ ಪಾಕಿಸ್ಥಾನ ರಾಷ್ಟ್ರೀಯ ದಿನ ಸಮಾರಂಭದಲ್ಲೂ ಪಾಲ್ಗೊಂಡಿದ್ದ. ಇಲ್ಲಿ ಅವನಿಗೆ ಪಾಕಿಸ್ಥಾನದ ಸೇನೆ ಮತ್ತು ಐಎಸ್‌ಐ ಅಧಿಕಾರಿಗಳ ಪರಿಚಯ ಮಾಡಿಕೊಡಲಾಗಿತ್ತು. 2020, 2021 ಮತ್ತು 2024ರಲ್ಲಿ ಮೂರು ಸಲ ಪಾಕಿಸ್ಥಾನಕ್ಕೆ ಹೋಗಿ ಬಂದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.