ದುರುದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾದ
ಮಂಗಳೂರು: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾ.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶ ಹೊರಡಿಸಿ ಜೂನ್ 10ಕ್ಕೆ ವಿಚಾರಣೆ ಮುಂದೂಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಎಫ್‌ಐಆರ್ ದಾಖಲಾದ ಬಳಿಕ ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ನಿನ್ನೆಯೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಭಾಷಣ ಮಾಡಿದ ಹಲವು ದಿನಗಳ ಬಳಿಕ ದುರುದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ, ಪೊಲೀಸರ ವಿಚಾರಣೆಗೆ ಅರ್ಜಿದಾರರು ಸಹಕರಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೆ ದೋಷಾರೋಪಪಟ್ಟಿ ಸಲ್ಲಿಸುವಂತಿಲ್ಲ. ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಮಧ್ಯಂತರ ಆದೇಶ ನೀಡಿದೆ.
ಮೇ 12ರಂದು ಬಂಟ್ವಾಳದ ಕಾವಳಪಡೂರು ಗ್ರಾಮದ ಮದುವೆ ಪ್ಯಾಲೇಸ್ ಹಾಲ್ನಲ್ಲಿ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದು ಮತ್ತು ಗುಂಪುಗಳ ನಡುವೆ ದ್ವೇಷ ಬಿತ್ತುವಂತೆ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 353(2)ರಡಿ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದೆ.