ಪೊಲೀಸರಿಗೆ ಸವಾಲಾಗಿ ಪರಿಣಮಿಸಿರುವ ಭಾರಿ ದೊಡ್ಡ ಕಳ್ಳತನ ಕೃತ್ಯ
ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆನರಾ ಬ್ಯಾಂಕ್ ಶಾಖೆಯಿಂದ ಕಳ್ಳರು ಕಳೆದ ಮೇ 25ರಂದು ಬರೋಬ್ಬರಿ 58.975 ಕಿಲೋ ಚಿನ್ನ ಮತ್ತು 5.20 ಲ.ರೂ. ನಗದು ಕಳ್ಳತನ ಮಾಡಿದ್ದು, ಈ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಖದೀಮರ ಪತ್ತೆಗೆ ಪೊಲೀಸ್ ಇಲಾಖೆ ಎಂಟು ವಿಶೇಷ ತಂಡಗಳನ್ನು ರಚಿಸಿದೆ. ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಮೇ 25ರಂದು ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಕಳ್ಳತನವಾಗಿದೆ. ಬ್ಯಾಂಕ್ನಲ್ಲಿ ಅಡವಿಟ್ಟ ಹಾಗೂ ಲಾಕರ್‌ನಲ್ಲಿ ಇಟ್ಟಿದ್ದ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಚಿನ್ನದ ಅಂದಾಜು ಮೌಲ್ಯ 53 ಕೋಟಿ 26ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ನೀಡಿರುವ ಮಾಹಿತಿ ಪ್ರಕಾರ, 6 ರಿಂದ 8 ಜನ ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಲಾಕರ್ ಓಪನ್ ಮಾಡಲು ಮತ್ತು ಸೈರನ್ ಬಂದ್ ಮಾಡಲು ನಕಲಿ ಕೀ ಬಳಕೆ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ತಿರುಗಿಸಿದ್ದು ಹಾಗೂ ಸಿಸಿ ಕ್ಯಾಮರಾ (ಎನ್ವಿಆರ್) ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದಾರೆ. ಸತತ ಎರಡು ದಿನಗಳ ಕಾಲ ಸಂಚು ರೂಪಿಸಿ, ಪ್ಲ್ಯಾನ್ ಮಾಡಿ ಕೃತ್ಯವೆಸಲಾಗಿದೆ. ಖದೀಮರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.
ತನಿಖೆಯ ದಿಕ್ಕು ತಪ್ಪಿಸಲು ಬ್ಯಾಂಕ್ ಪ್ರವೇಶ ದ್ವಾರದ ಕೀ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿದ್ದಾರೆ. ನಂತರ ಬ್ಯಾಂಕ್ ಕಿಟಕಿಯ ಸರಳುಗಳನ್ನು ಒಳಗಿನಿಂದಲೇ ಕಟ್ ಮಾಡಿ ಒಳಗೆ ನುಗ್ಗಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ. ಅಲ್ಲದೆ ಬ್ಯಾಂಕ್ ಒಳಗೆ ವಾಮಾಚಾರವಾಗಿದೆ ಎಂದು ಬಿಂಬಿಸಲು ಕಪ್ಪು ಬಟ್ಟೆಯ ಬೊಂಬೆ ಇಟ್ಟು ಪೂಜೆ ಮಾಡಿದ್ದಾರೆ.
fk232q