ರಷ್ಯಾ ವಾಯುನೆಲೆ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ : 40 ಯುದ್ಧ ವಿಮಾನಗಳು ನಾಶ

ಟ್ರಕ್‌ಗಳಲ್ಲಿ ಡ್ರೋನ್‌ಗಳನ್ನು ಸಾಗಿಸಿ ವಾಯುನೆಲೆಗಳ ಮೇಲೆ ದಾಳಿ ಮಾಡಿದ ಉಕ್ರೇನ್‌

ಮಾಸ್ಕೊ : ಒಂದೆಡೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನ ನಡೆಯುತ್ತಿದ್ದರೆ ಇನ್ನೊಂದೆಡೆ ಕಾಳಗ ಭೀಕರ ಸ್ವರೂಪ ಪಡೆದುಕೊಂಡಿದೆ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಆರಂಭವಾಗುವ ಮೊದಲೇ ಭಾನುವಾರ ಉಕ್ರೇನ್ ರಷ್ಯಾದ ವಾಯುನೆಲೆಗಳ ಮೇಲೆ ಭೀಕರ ಡ್ರೋನ್ ದಾಳಿ ನಡೆಸಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ನಾಶಮಾಡಿದೆ. ಈ ದಾಳಿ ಉಕ್ರೇನಿನ ಗುಪ್ತಚರ ಸಂಸ್ಥೆಗಳು ದೀರ್ಘಕಾಲದಿಂದ ಯೋಜಿಸಿ ಮಾಡಿದ ಕಾರ್ಯಾಚರಣೆಯಾಗಿತ್ತು.

ಉಕ್ರೇನಿಯನ್ ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ಈ ಕಾರ್ಯಾಚರಣೆಯನ್ನು ಸುಮಾರು ಒಂದೂವರೆ ವರ್ಷಗಳ ಕಾಲ ರಹಸ್ಯವಾಗಿ ಸಿದ್ಧಪಡಿಸಲಾಗಿತ್ತು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೇ ಇದನ್ನು ಮೇಲ್ವಿಚಾರಣೆ ಮಾಡಿದ್ದರು ಎಂದು ಹೇಳಿದ್ದಾರೆ. ಡ್ರೋನ್‌ಗಳನ್ನು ಟ್ರಕ್‌ಗಳ ಮೂಲಕ ರಷ್ಯಾದೊಳಗೆ ಸಾಗಿಸಿ ಅಲ್ಲಿಂದ ಉಡಾಯಿಸಲಾಯಿತು ಎಂದು ತಿಳಿಸಿದ್ದಾರೆ. ಈ ಡ್ರೋನ್‌ಗಳನ್ನು ಟ್ರಕ್‌ಗಳಲ್ಲಿ ಅಳವಡಿಸಲಾದ ಮರದ ಕ್ಯಾಬಿನ್‌ಗಳ ಛಾವಣಿಯ ಕೆಳಗೆ ಅಡಗಿಸಿ ರಷ್ಯಾಕ್ಕೆ ಸಾಗಿಸಲಾಯಿತು. ಡ್ರೋನ್ ದಾಳಿಯ ಸಮಯದಲ್ಲಿ, ರಿಮೋಟ್ ಮೂಲಕ ಟ್ರಕ್‌ನ ಮೇಲ್ಛಾವಣಿಯನ್ನು ತೆರೆಯಲಾಯಿತು ಮತ್ತು ಡ್ರೋನ್‌ಗಳು ಸ್ವಲ್ಪ ದೂರ ಹಾರಿ ರಷ್ಯಾದ ವಿಮಾನಗಳನ್ನು ನಾಶಮಾಡಿದವು.





















































 
 

ಈ ಡ್ರೋನ್ ದಾಳಿ ಉಕ್ರೇನ್‌ನಿಂದ 4,000 ಕಿಲೋಮೀಟರ್ ದೂರದಲ್ಲಿರುವ ರಷ್ಯಾದ ಇರ್ಕುಟ್ಸ್ಕ್ ಪ್ರದೇಶದ ಬೆಲಾಯಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿತ್ತು. ಇದು ರಷ್ಯಾದ ಪ್ರಮುಖ ಸಮರ ನಿಲ್ದಾಣಗಳಲ್ಲಿ ಒಂದಾಗಿದೆ, ಇಲ್ಲಿಂದ ಯುದ್ಧ ವಿಮಾನಗಳು ಹಾರುತ್ತವೆ.

ಕಳೆದ ಮೂರು ವರ್ಷಗಳಿಂದ ರಷ್ಯಾ-ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿದೆ. ಇದೀಗ ಉಕ್ರೇನ್​ ರಷ್ಯಾದೊಳಗೆ ನುಗ್ಗಿ 40ಕ್ಕೂ ಹೆಚ್ಚು ಸೇನಾ ವಿಮಾನಗಳನ್ನು ನಾಶಪಡಿಸಿದ್ದು, ಇದುವರೆಗಿನ ಅತ್ಯಂತ ದೊಡ್ಡ ದಾಳಿ ಇದಾಗಿದೆ.

ಆಪರೇಷನ್ ಸ್ಪೈಡರ್ ವೆಬ್ ಅಡಿಯಲ್ಲಿ ರಷ್ಯಾದ 4 ವಿಭಿನ್ನ ವಾಯುನೆಲೆಗಳಲ್ಲಿ ನಿಲ್ಲಿಸಲಾಗಿದ್ದ, 40 ಮಿಲಿಟರಿ ವಿಮಾನಗಳನ್ನು ನಾಶಪಡಿಸಲಾಗಿದೆ. ಈ ದಾಳಿಯನ್ನು ಉಕ್ರೇನ್​ನ ಭದ್ರತಾ ಸೇವಾ ಸಂಸ್ಥೆ ನಡೆಸಿದೆ ಎಂದು ಹೇಳಲಾಗಿದೆ. ಇವುಗಳನ್ನು FPV ಡ್ರೋನ್‌ಗಳ ಮೂಲಕ ನಡೆಸಲಾಯಿತು. ಈ ದಾಳಿಯಿಂದಾಗಿ ಮಾಸ್ಕೊಗೆ ಶತಕೋಟಿ ಡಾಲರ್ ನಷ್ಟವಾಗಿದ್ದು, ಇದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನ ಡ್ರೋನ್ ದಾಳಿಯಾದ ಕೆಲವೇ ಗಂಟೆಗಳಲ್ಲಿ ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ರಷ್ಯಾ ಇದುವರೆಗೆ 472 ಡ್ರೋನ್‌ಗಳು ಮತ್ತು 7 ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಹಾರಿಸಿದೆ. ತರಬೇತಿ ಕೇಂದ್ರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 12 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಸೇನೆ ತಿಳಿಸಿದೆ.

ಉಕ್ರೇನ್‌ನ ಉತ್ತರ ಸುಮಿ ಪ್ರದೇಶದ ಮತ್ತೊಂದು ಗ್ರಾಮವನ್ನು ಭಾನುವಾರ ವಶಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಇತ್ತೀಚಿನ ವಾರಗಳಲ್ಲಿ ರಷ್ಯಾ ಹಲವಾರು ಹಳ್ಳಿಗಳನ್ನು ವಶಪಡಿಸಿಕೊಂಡಿದೆ ಮತ್ತು 50,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಗಡಿಯ ಬಳಿ ಜಮಾಯಿಸಿದ್ದಾರೆ ಎಂದು ಉಕ್ರೇನ್ ಹೇಳಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top