ಸ್ವಾಧೀನ ಕಳೆದುಕೊಂಡ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು
ಮಂಗಳೂರು: ಉಳ್ಳಾಲದ ಮಂಜನಾಡಿ ಸಮೀಪ ಮೊಂಟೆಪದವು ಕೋಡಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಬಲಿಯಾದ ಘಟನೆಯಲ್ಲಿ ಬದುಕುಳಿದವರ ಬದುಕು ಇನ್ನಷ್ಟು ಯಾತನಾಮಯವಾಗಿದೆ. ಮಣ್ಣಿನಡಿ ಸಿಲುಕಿ ಮೃತಪಟ್ಟ ಇಬ್ಬರು ಮಕ್ಕಳು ಮತ್ತು ಹಿರಿಯ ಮಹಿಳೆಯ ಅಂತ್ಯಸಂಸ್ಕಾರವನ್ನು ಶನಿವಾರ ಕಣ್ಣೀರಕೋಡಿಯ ನಡುವೆಯೇ ಮಾಡಲಾಗಿದೆ. ಸರ್ವಧರ್ಮದವರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲರೂ ಕಣ್ಣೀರು ಸುರಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಮೂವರನ್ನು ಮನೆ ಕುಸಿದ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಿದ್ದಾರೆ. ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತದೇಹವನ್ನು ಹೂಳಲಾಗಿದೆ. ಪಕ್ಕದಲ್ಲೇ ಅಜ್ಜಿ ಪ್ರೇಮಾ ಅವರ ಶವಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಮಗನೇ (ಮಕ್ಕಳ ತಂದೆ) ಹೆತ್ತ ಮಕ್ಕಳು ಮತ್ತು ತಾಯಿಯ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಬಂದಿರುವುದನ್ನು ನೋಡಿ ಎಲ್ಲರೂ ವಿಧಿಗೆ ಶಾಪ ಹಾಕುತ್ತಿದ್ದರು.
ಅವಘಡದಲ್ಲಿ ಬದುಕುಳಿದವರ ಮಹಿಳೆ ಅಶ್ವಿನಿಯವರಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಎರಡೂ ಕಾಲುಗಳು ಸ್ವಾಧಿನ ಕಳೆದುಕೊಂಡಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಎರಡೂ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ. ಗಾಯಗೊಂಡಿರುವ ಅಶ್ವಿನಿಯವರ ಮಾವ ತುಸು ಚೇತರಿಸಿಕೊಂಡಿದ್ದಾರೆ.
ಮೇ 30ರ ನಸುಕಿ ಜಾವ ಸುರಿದ ಭಾರಿ ಮಳೆಯಿಂದಾಗಿ ಮೊಂಟೆಪದವಿನಲ್ಲಿ ಮನೆ ಮೇಲೆ ಗುಡ್ಡ ಕುಸಿದಿತ್ತು. ಅವಶೇಷಗಳ ಅಡಿ ಸಿಲುಕಿದ್ದ ಅಶ್ವಿನಿ ತನ್ನ ಇಬ್ಬರು ಮಕ್ಕಳನ್ನು ಬಿಗಿದಪ್ಪಿ ಕಾಪಾಡಲು ಯತ್ನಿಸಿದ್ದರು. ಆದರೆ ಒಂದು ಮಗು ಅಲ್ಲಿಯೇ ಸಾವನ್ನಪ್ಪಿತ್ತು. ಇನ್ನೊಂದು ಮಗು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಸಾವನ್ನಪ್ಪಿತ್ತು. ಗಾಯಗೊಂಡಿದ್ದ ಅಶ್ವಿನಿಯವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಿಳೆಯ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಕಾಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿದ್ದಾರೆ. ಒಂದು ಕಾಲಿನ ಪಾದದ ಭಾಗದಿಂದ ಕತ್ತರಿಸಲಾಗಿದೆ. ಮತ್ತೊಂದು ಪೂರ್ತಿ ಕಾಲು ಕತ್ತರಿಸಿದ್ದಾರೆ. 24 ಗಂಟೆಗಳ ಕಾಲ ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ.
























