ಮೊಂಟೆಪದವು ಗುಡ್ಡಕುಸಿತಕ್ಕೆ ನಿರ್ಲಕ್ಷ್ಯ ಕಾರಣ : ಪಿಡಿಒ, ಕೆಆರ್​ಡಿಐಎಲ್ ಅಧಿಕಾರಿಗಳ ವಿರುದ್ಧ ದೂರು

ಮೂವರು ಸಾವನ್ನಪ್ಪಿದ ದಾರುಣ ಘಟನೆ

ಮಂಗಳೂರು : ಮಂಜನಾಡಿಯ ಮೊಂಟೆಪದವಿನಲ್ಲಿ ಶುಕ್ರವಾರ ನಸುಕಿನ ಹೊತ್ತು ಗುಡ್ಡಕುಸಿತವಾಗಲು ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ ಕಾರಣವೆಂಬ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗಾಯಾಳು ಅಶ್ವಿನಿ ಸಹೋದರ ತೇಜು ಕುಮಾರ್ ಆರೋಪಿಸಿದ್ದಾರೆ.
ಈ ಕುರಿತಾಗಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ಸಹ ನೀಡಿರುವ ತೇಜು ಕುಮಾರ್,​ ಮಂಜನಾಡಿ ಪಿಡಿಒ ಚೈತ್ರಾ, ಕೆಆರ್​ಡಿಐಎಲ್ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್​​​ಗಳು ಕಾರಣ ಎಂದು ಆರೋಪಿಸಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.





















































 
 

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿ ಎಂಬಲ್ಲಿ ನನ್ನ ಅಕ್ಕ ಮತ್ತು ಬಾವ ಅದರ ತಂದೆ ತಾಯಿ ಇಬ್ಬರು ಮಕ್ಕಳೊಂದಿಗೆ ಆ ಮನೆಯಲ್ಲಿ ವಾಸವಾಗಿದ್ದರು. ಮೇ 30ರ ಬೆಳಿಗ್ಗೆ 3.30 ಗಂಟೆಗೆ ಸುರಿದ ಮಳೆಯಿಂದ ನನ್ನ ಬಾವ ಸೀತಾರಾಮರ ಮನೆ ಮೇಲೆ ಗುಡ್ಡ ಕುಸಿದು ನನ್ನ ಭಾವನ ತಂದೆ ಕಾಂತಪ್ಪ ಪೂಜಾರಿ ಕಾಲು ತುಂಡಾಗಿದೆ. ಆಕ್ಕನ ಮಕ್ಕಳದಾದ ಆರ್ಯನ್ (3) ವರ್ಷ ಹಾಗೂ ಆರುಷ್(ವರ್ಷ 6 ತಿಂಗಳ ಮಗು) ಹಾಗೂ ನನ್ನ ಬಾವನ ಅಮ್ಮ ಪ್ರೇಮ ಪೂಜಾರಿ ಮನೆಯ ಅಡಿಯಲ್ಲಿ ಮೃತಪಟ್ಟಿದ್ದಾರೆ. ನನ್ನ ಬಾವ ಸೀತಾರಾಮ ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಮನೆಯ ಹಿಂದೆ ಗುಡ್ಡ ಇದ್ದು, ಗುಡ್ಡದ ಮೇಲೆ ರಸ್ತೆ ಕಾಮಗಾರಿ ನಡೆಸಿದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್​ಡಿಐಎಲ್ ಅಧಿಕಾರಿಗಳು ಕೈಗೊಂಡಿರುತ್ತಾರೆ. ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರ ಹಾಗೂ ಕೆಆರ್​ಡಿಐಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್​ಗಳು ನಡೆಸಿದ ಅವೈಜ್ಞಾನಿಕ ರಸ್ತೆ ಕಾರಣ ಎಂದು ಆರೋಪಿಸಿದ್ದಾರೆ.

ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್​ಡಿಐಎಲ್ ಅಧಿಕಾರಿಗಳು ಸಾವು ನೋವು ಸಂಭವಿಸುವ ಸಾಧ್ಯತೆ ಬಗ್ಗೆ ತಿಳಿದಿದ್ದು ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದ ಕಾಮಗಾರಿಯ ಕೃತ್ಯದಿಂದ ಘೋರ ಸಾವು ನೋವಿಗೆ ಕಾರಣ ಆದ ಅಧಿಕಾರಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ತೇಜು ಕುಮಾರ್ ಕೋರಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top