ಮೇ ತಿಂಗಳಲ್ಲಿ 125 ವರ್ಷಗಳ ಬಳಿಕ ಸುರಿದ ಅತ್ಯಧಿಕ ಮಳೆ : 67 ಮಂದಿ ಸಾವು

ಮಹಾಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಅನಾಹುತ

ಬೆಂಗಳೂರು : ರಾಜ್ಯದಲ್ಲಿ ಮೇ ತಿಂಗಳಲ್ಲಿ ಇಷ್ಟು ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು 125 ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ. ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದಂತಹ ಮಳೆ ಮೇ ತಿಂಗಳೊಂದರಲ್ಲೇ ಸುರಿದಿದೆ. ಇದು ಶತಮಾನದ ಮಳೆ ಎಂದು ಹೇಳಲಾಗುತ್ತಿದ್ದು, ಮಳೆ ಸಂಬಂಧಿ ಅವಘಡಗಳಿಗೆ 67 ಜನರು ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ನಾಶನಷ್ಟ ಉಂಟಾಗಿದೆ. ಭೂಕುಸಿತ, ನೆರೆ, ವಿದ್ಯುತ್‌ ಶಾಕ್‌ ಮತ್ತಿತರ ಅವಘಡಗಳಲ್ಲಿ ಶುಕ್ರವಾರ ಒಂದೇ ದಿನ ಐದು ಮಂದಿ ಸಾವಿಗೀಡಾಗಿದ್ದಾರೆ. ಮಹಾಮಳೆಗೆ ದಕ್ಷಿಣ ಕನ್ನಡ ಅಕ್ಷರಶಃ ತತ್ತರಿಸಿದೆ. ಭೂಮಿ ಕುಸಿದು ನಾಲ್ವರ ಸಾವು ಬೆನ್ನಲ್ಲೇ ಈಗ ಮತ್ತೆ ಆತಂಕ ಶುರುವಾಗಿದೆ. ಶನಿವಾರ ಕೂಡ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಂಗನವಾಡಿಗಳು, ಶಾಲೆಗಳು, ಪಿಯು ಕಾಲೇಜುಗಳಿಗೂ ಇವತ್ತು ರಜೆ ಘೋಷಿಸಲಾಗಿದೆ.



















































 
 

ರಾಜ್ಯದಲ್ಲಿ 125 ವರ್ಷಗಳಲ್ಲೇ ಅತ್ಯಧಿಕ ಮಳೆ ಸುರಿದಿದೆ ಎಂದು ಅಧಿಕಾರಿಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಹೇಳಿದ್ದಾರೆ. 125 ವರ್ಷಗಳಲ್ಲಿ ಮೇ ತಿಂಗಳಲ್ಲಿ ಇಷ್ಟೊಂದು ಮಳೆ ಬಿದ್ದಿದೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್‌ನಿಂದ ಈವರೆಗೆ ರಾಜ್ಯದಲ್ಲಿ ಮಳೆ ಅನಾಹುತಗಳಿಗೆ ಬರೋಬ್ಬರಿ 67 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನ ಕಂದಾಯ ಇಲಾಖೆ ನೀಡಿದೆ.

ಮಾರ್ಚ್‌ನಿಂದ ಮೇ ವರೆಗೆ ಸಾಮಾನ್ಯವಾಗಿ ಪೂರ್ವ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ವರ್ಷ ಮುಂಗಾರು ಮಳೆ ರಾಜ್ಯಕ್ಕೆ ಸುಮಾರು 10 ದಿನಗಳ ಮುಂಚಿತವಾಗಿ ಪ್ರವೇಶಿಸಿದೆ. ಇದರ ಪರಿಣಾಮವಾಗಿ, ಮೈಸೂರು, ಕೊಡಗು, ಮಂಡ್ಯ ಮತ್ತು ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದೆ.

ಇನ್ನು ಭಾರತೀಯ ಹವಾಮಾನ ಇಲಾಖೆ ಪ್ರಕಾರ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಸಿಡಿಲು ಗುಡುಗಿನೊಂದಿಗೆ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಉತ್ತರ ಕನ್ನಡದಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ.

ಮಳೆಯಿಂದಾದ ಅನಾಹುತದಿಂದ ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಗುಡ್ಡದ ಸಮೇತ ಮರಗಳು ಬಿದ್ದು ಮನೆಯಲ್ಲಿದ್ದ ಮೂವರು ಅಸುನೀಗಿದ್ದಾರೆ. ದೇರಳಕಟ್ಟೆ ಬಳಿಯ ಮೊಂಟೆಪದವು ಎಂಬಲ್ಲಿ ನೌಶಾದ್ ಅನ್ನೋರ ಮನೆಯ ಮೇಲೆ ಗುಡ್ಡ ಕುಸಿದಿದ್ದು, 10 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಬೆಳ್ತಂಗಡಿಯಲ್ಲಿ ಲೈನ್‌ಮನ್‌ ಒಬ್ಬರು ವಿದ್ಯುತ್‌ ಆಘಾತದಿಂದ ಸಾವಿಗೀಡಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top