ಅಬ್ದುಲ್‌ ರಹಿಮಾನ್‌ ಹತ್ಯೆಗೆ ಆಕ್ರೋಶ : ಕಾಂಗ್ರೆಸ್‌ಗೆ ಮುಸ್ಲಿಮ್‌ ಮುಖಂಡರ ರಾಜೀನಾಮೆ

ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಆಕ್ಷೇಪ

ಮಂಗಳೂರು: ಬಂಟ್ವಾಳದ ಅಬ್ದುಲ್‌ ರಹಿಮಾನ್‌ ಹತ್ಯೆಯ ಬಳಿಕ ಕಾಂಗ್ರೆಸ್‌ನ ಮೇಲೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಲವು ನಾಯಕರು ಪಕ್ಷದಲ್ಲಿರುವ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಸರ್ಕಾರ ಕೋಮು ಹಿಂಸಾಚಾರ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪೋಸ್ಟ್‌ಗಳಿಗೆ ಮುಸ್ಲಿಮ್ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಅಬ್ದುಲ್‌ ರಹಿಮಾನ್‌ ಶವವನ್ನು ಆಸ್ಪತ್ರೆಗೆ ತಂದಾಗ ಅಲ್ಲಿ ಜಮಾಯಿಸಿದ್ದ ಮುಸ್ಲಿಮರು ತಮ್ಮ ಸಮುದಾಯದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮುಸ್ಲಿಮರ ಹಿತರಕ್ಷಣೆ ಮಾಡಲು ಸಾಧ್ಯವಾಗದ ನೀವು ಮುಖಂಡರಾಗಿರಲು ಲಾಯಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ತಮ್ಮ ಸಮುದಾಯದ ಆಕ್ರೋಶಕ್ಕೆ ಗುರಿಯಾಗುತ್ತಿರುವ ನಾಯಕರು ಕಾಂಗ್ರೆಸ್‌ನಲ್ಲಿರುವ ಹುದ್ದೆಗಳನ್ನು ತೊರೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್ ರಾಜೀನಾಮೆ ನೀಡಿರುವುದು ಪ್ರಮುಖ ಬೆಳವಣಿಗೆಯಾಗಿದೆ.



















































 
 

ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ನಮಗೆ ನ್ಯಾಯ ಸಿಗುವವರೆಗೂ ನಾವು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಆಶ್ರಫ್‌ ಹೇಳಿದ್ದಾರೆ. ವೈಯುಕ್ತಿಕ ಕಾರಣಕ್ಕೆ ಅಬ್ದುಲ್ ರಹಿಮಾನ್‌ ಕೊಲೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆಯನ್ನು ಸಚಿವರು ವಾಪಾಸ್ ಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷದಲ್ಲಿರುವ ಸಮುದಾಯದ ನಾಯಕರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ. ಪರ್ಯಾಯ ಪಕ್ಷ ಕಟ್ಟುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top