ಆರ್‌ಸಿಬಿ, ಪಂಜಾಬ್, ಗುಜರಾತ್, ಮುಂಬೈ ತಂಡಗಳ ನಡುವೆ ಹಣಾಹಣಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಲೀಗ್ ಹಂತದ ಪಂದ್ಯಗಳು ನಿನ್ನೆಗೆ ಮುಗಿದಿದ್ದು, ಪ್ಲೇಆಫ್ ಪಂದ್ಯಗಳು ಮೇ 29ರಿಂದ ಶುರುವಾಗಲಿವೆ. ಈ ಸುತ್ತಿನಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಅಂದರೆ ಮೊದಲ ಮೂರು ಮ್ಯಾಚ್ಗಳು ಫೈನಲ್ಗಾಗಿ ನಡೆಯಲಿರುವ ಅರ್ಹತಾ ಪಂದ್ಯಗಳು. ಇದಾದ ಬಳಿಕ ಜೂನ್ 3 ರಂದು ಫೈನಲ್ ಮ್ಯಾಚ್ ನಡೆಯಲಿದೆ.
10 ತಂಡಗಳಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ನಾಲ್ಕು ತಂಡಗಳು ಮುಂದಿನ ಹಂತಕ್ಕೇರಿವೆ. ಅದರಂತೆ ದ್ವಿತೀಯ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಣಕ್ಕಿಳಿಯಲಿವೆ.
ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಕ್ವಾಲಿಫೈಯರ್ ಪಂದ್ಯವಾಡಿದರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಎಲಿಮಿನೇಟರ್ ಮ್ಯಾಚ್ ಆಡಲಿದೆ.
ಮೇ 29ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಚಂಡೀಗಢದ ಮುಲ್ಲನ್ಪುರ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ರಾತ್ರಿ 7.30 ಕ್ಕೆ ಶುರುವಾಗಲಿದೆ.
ಮೇ 30 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಲ್ಲನ್ಪುರ್ ಮೈದಾನದಲ್ಲೇ ನಡೆಯಲಿರುವ ಈ ಪಂದ್ಯವು ರಾತ್ರಿ 7.30 ಕ್ಕೆ ಆರಂಭವಾಗಲಿದೆ.
ಇಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡ ಫೈನಲ್ಗೆ ಪ್ರವೇಶಿಸಲಿದೆ. ಹಾಗೆಯೇ ಸೋತ ತಂಡಕ್ಕೆ ಮತ್ತೊಂದು ಪಂದ್ಯವಾಡಲು ಅವಕಾಶ ಸಿಗಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡ ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಜೂನ್ 1 ರಂದು ಅಹದಾಬಾದ್ನಲ್ಲಿ ದ್ವಿತೀಯ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.
ಜೂ.3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ರಾತ್ರಿ 7.30ಕ್ಕೆ ಶುರುವಾಗಲಿರುವ ಈ ಪಂದ್ಯದೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಕ್ಕೆ ತೆರೆ ಬೀಳಲಿದೆ.
1buvdh