ಮಂಗಳೂರು : ಹುಟ್ಟೂರು ಕೊಳತ್ತಮಜಲ್‌ಗೆ ಅಬ್ದುಲ್‌ ರಹಿಮಾನ್‌ ಮೃತದೇಹ ರವಾನೆ

ಸರಣಿ ಹತ್ಯೆಗಳಿಂದ ಕರಾವಳಿಯಲ್ಲಿ ಆತಂಕದ ವಾತಾವರಣ- ಮೇ 30ರವರೆಗೆ ನಿಷೇಧಾಜ್ಞೆ

ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳ ಸಮೀಪ ಮುಸ್ಲಿಂ ಯುವಕನನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕರಾವಳಿಯಲ್ಲಿ ಮತ್ತೆ ಆತಂಕದ ವಾತಾವರಣ ಉಂಟು ಮಾಡಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮುಸ್ಲಿಮರು ಒತ್ತಾಯಿಸಿ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಮೇ 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗೂ ಮಂಗಳೂರು ಪೊಲೀಸ್‌ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

ಕೊಲೆಯಾದ ಅಬ್ದುಲ್ ಅಬ್ದುಲ್ ರಹಿಮಾನ್‌ ಯಾನೆ ಮೋನು ಅವರ ಮೃತದೇಹವನ್ನು ಕೊಳತ್ತಮಜಲಿಗೆ ಇಂದು ಬೆಳಗ್ಗೆ ಸಾಗಿಸಲಾಯಿತು. ಕುತ್ತಾರ್ ಮದನಿ ನಗರ ನಗರ ಮಸೀದಿಯಲ್ಲಿ ಅಬ್ದುಲ್ ರಹಿಮಾನ್‌ ಯಾನೆ ಮೋನು ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು. ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್‌, ಮಿತ್ತಬೈಲ್‌ ‌ಮಾರ್ಗವಾಗಿ ಕೊಳತ್ತಮಜಲಿನ‌ ಮನೆಗೆ ಕೊಂಡೊಯ್ದು, ನಂತರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ ಆವರಣದಲ್ಲಿ ದಫನ ಮಾಡಲಾಗುತ್ತದೆ.



















































 
 

ರಹೀಂ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆ ಮುಂದೆ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಸೇರಿದ ಜನ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿ ಪೊಲೀಸರ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಪೊಲೀಸ್‌ ಕಮಿಷನರ್‌ ಮತ್ತು ಕೆಲವು ಮುಸ್ಲಿಂ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಪಿಕಪ್ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮದುವೆಯಾಗಿ ಎರಡು ಮಕ್ಕಳು ಇರುವ ರಹೀಂ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ, ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ. ಅಮಾಯಕನಾಗಿರುವ ವ್ಯಕ್ತಿಯನ್ನ ಹತ್ಯೆ ಮಾಡಲಾಗಿದೆ, ಈ ಹತ್ಯೆ ಹಿಂದೆ ಇರುವ ಎಲ್ಲರನ್ನೂ ತಕ್ಷಣ ಬಂಧಿಸಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ.

ನಿಷೇಧಾಜ್ಞೆ ಜಾರಿ

ಅಬ್ದುಲ್ ರಹಿಮಾನ್ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಮೇ 30 ರವರೆಗೆ ನಿಷೇಧಾಜ್ಞೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ತರಿಸಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು ಭದ್ರತೆ ಪರಿಶೀಲಿಸಲಿದ್ದಾರೆ. ಮೃತ ಅಬ್ದುಲ್ ರಹಿಮಾನ್ ಅಂತ್ಯ ಸಂಸ್ಕಾರ ಇಂದು ಅವರ ಸ್ವಗ್ರಾಮ ಕೊಳ್ತಮಜಲ್‌ನಲ್ಲಿ ನಡೆಯಲಿದೆ.

ಕೊಲೆಯಾಗಿದ್ದು ಹೇಗೆ?

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್‌ ಯಾನೆ ರಹೀಂ(34) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ ಬಳಿ ಒಂದು ಲೋಡ್‌ ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದಾರೆ. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದಾರೆ. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

1 thought on “ಮಂಗಳೂರು : ಹುಟ್ಟೂರು ಕೊಳತ್ತಮಜಲ್‌ಗೆ ಅಬ್ದುಲ್‌ ರಹಿಮಾನ್‌ ಮೃತದೇಹ ರವಾನೆ”

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top