ರಸ್ತೆತಡೆ ಮಾಡಿ ಸರಕಾರದ ವಿರುದ್ಧ ಘೋಷಣೆ ಕೂಗಿದ ಉದ್ರಿಕ್ತ ಗುಂಪು
ಮಂಗಳೂರು: ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹಿಮಾನ್(34) ಮೃತದೇಹ ಸಾಗಾಟದ ವೇಳೆ ಫರಂಗಿಪೇಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಜನರ ಗುಂಪು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಮಯ್ಯತ್ ಸ್ನಾನ ನಿರ್ವಹಿಸಿ ಅಲ್ಲಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು. ನೂರಾರು ಮಂದಿ ವಾಹನಗಳಲ್ಲಿ ಆಂಬುಲೆನ್ಸ್ ಜೊತೆ ಸಾಗಿದರು. ಮೃತದೇಹ ಕುತ್ತಾರ್, ತೊಕ್ಕೊಟ್ಟು, ಪಂಪ್‌ವೆಲ್ ಮಾರ್ಗವಾಗಿ ಫರಂಗಿಪೇಟೆ ತಲುಪಿದಾಗ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿತು.
ಆಕ್ರೋಶಿತ ಗುಂಪು ರಹಿಮಾನ್ ಪರ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ ಗುಂಪನ್ನು ಚದುರಿಸಿ ಆಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟರು.
ನಗರದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಅನೇಕ ಜನ ರಸ್ತೆಗೆ ಬಂದು ಶವಯಾತ್ರೆ ವೀಕ್ಷಿಸಿದರು. ನಗರದಿಂದ ಕೊಲ್ತಮಜಲುವಿಗೆ ಹೋಗುವ ರಸ್ತೆಯಲ್ಲಿ ಮತ್ತು ಎಲ್ಲ ಸರ್ಕಲ್ಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೆಹಮಾನ್ ಶವ ಹೊತ್ತ ವಾಹನದ ಜೊತೆ ಹತ್ತಾರು ವಾಹನಗಳು ಸಾಗಿದವು.
kznrze