ಎಂಟು ತಂಡಗಳಿಂದ ಯಕ್ಷಗಾನ ಸ್ಪರ್ಧೆ; ಕ್ರಿಕೆಟಿಗ ರೋಹಿತ್ ಶರ್ಮ ತಾರಾ ಮೆರುಗು
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಜೂನ್ 1ರಂದು ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ ವರ್ಷ ಯಕ್ಷ ಸಂಭ್ರಮಕ್ಕೆ ಜನಪ್ರಿಯ ನಟ ಸುದೀಪ್ ತಾರಾ ಮೆರುಗು ನೀಡಿದ್ದರೆ ಈ ವರ್ಷ ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮ ಆಗಮಿಸಿ ಮೆರುಗು ನೀಡಲಿದ್ದಾರೆ. ಇದರೊಂದಿಗೆ ಸಚಿವರಾದ ಶಿವರಾಜ ತಂಗಡಗಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಕಲಾ ಸಮ್ಮೇಳನ ಬೆಳಗ್ಗೆ 9.30ರಿಂದ ರಾತ್ರಿ 11ರ ವರೆಗೆ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಉದ್ಯಮಿ ಶಶಿಧರ ಬಿ ಶೆಟ್ಟಿ ವಹಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ಮೋಹನ್ ಆಳ್ವ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 1ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಆಶೀರ್ವಚನ ಮಾಡಲಿದ್ದಾರೆ. ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ತಾರಾ ಮೆರುಗು ನೀಡಲಿದ್ದಾರೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಮುಂಬೈ ಹೇರಂಭ ಇಂಡಸ್ಟ್ರೀಸ್‌ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು 2025 ರ ಯಕ್ಷಧ್ರುವ ಕಲಾ ಗೌರವ ನೀಡಿ ಗೌರವಿಸಲಾಗುವುದು. 2025 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗಳಿಗೆ ನೀಡಿ ಗೌರವಿಸಲಾಗುವುದು.2025 ರ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ, ವಿದ್ವಾಂಸ ಕುರಿಯ ಗಣಪತಿ ಶಾಸ್ತ್ರಿಯವರಿಗೆ ನೀಡಿ ಸನ್ಮಾನಿಸಲಾಗುವುದು. ರಾಷ್ಟ್ರೀಯ ಕಲಾ ಸಮ್ಮೇಳನದಲ್ಲಿ ಎಂಟು ತಂಡಗಳಿಂದ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಲಿದೆ.