ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ಸಲಹೆ
ಬೆಂಗಳೂರು: ರಾಜ್ಯದಲ್ಲಿ ಕೊರೊನ ಪ್ರಕರಣಗೂ ವರದಿಯಾಗುತ್ತಿದ್ದರೂ ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಹೊರಡಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮೇ 29ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮಾರ್ಗಸೂಚಿ ಶಾಲೆಗಳಿಗೆ ಕೊಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ, ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಕೊಟ್ಟರೆ ಅವುಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ ಕೊಡುವ ಮಾರ್ಗಸೂಚಿಯನ್ನೂ ನಾವು ಜಾರಿ ಮಾಡುತ್ತೇವೆ. ಇಲ್ಲಿಯವರೆಗೆ ಆರೋಗ್ಯ ಇಲಾಖೆ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ. ಸೋಮವಾರ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಸಿಎಂ ನಿರ್ದೇಶನ ಪಾಲನೆ ಮಾಡುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಹಾಕುವುದು ಒಳ್ಳೆಯದು. ಆರೋಗ್ಯದಲ್ಲಿ ವ್ಯತ್ಯಾಸ ಇರುವ ಮಕ್ಕಳು ಶಾಲೆಗೆ ಬರುವುದು ಬೇಡ ಎಂದು ಸೋಮವಾರ ನಡೆದ ಸಿಎಂ ಸಭೆಯಲ್ಲಿ ನಿರ್ಧಾರ ಆಗಿದೆ. ಶಿಕ್ಷಕರು, ಮಕ್ಕಳು, ಪೋಷಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಹೇಳಿದ್ದಾರೆ.