ಕಡಬ : ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆಸ್ಟೇಷನ್ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ವಿಶ್ವಜಿತ್ (23) ಮೃತಪಟ್ಟವರು.
ವಿಶ್ವಜಿತ್ ಮರ್ಧಾಳದ ಪಾಲಡ್ಕದಲ್ಲಿ ಫ್ಯಾಬ್ರಿಕೇಷನ್ ವ್ಯತ್ತಿ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹೊರಟು ಕಡಬ ಕಡೆ ಬೈಕಿನಲ್ಲಿ ಬರುತ್ತಿದ್ದಾಗ ಹಳೆ ಸ್ಟೇಷನ್ ಬಳಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಒಮ್ಮೆ ಕಾರೊಂದನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ವಿಶ್ವಜಿತ್ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಕಡಬ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾನೆ. ಇದೇ ವೇಳೆ ಒಮಿನಿ ಕಾರಿಗೂ ಹಾನಿಯಾಗಿದೆ. ಮೃತ ಯುವಕನಿಗೆ ತಾಯಿ, ಸಹೋದರ ಹಾಗೂ ಸಹೋದರಿ ಇದ್ದಾರೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.