ಪುತ್ತೂರು: ಪುತ್ತೂರಿನ ಮಳುವೇಲು ಮನೆಯ ಬಿಎಸ್ಫ್ 148 ಕಂಪೆನಿ ಕಮಾಂಡೆಂಟ್ ಆಗಿದ್ದು 150 ಯೋಧರು ಮತ್ತು ಅಧಿಕಾರಿಗಳನ್ನು ಒಳಗೊಂಡ ಪಡೆಯನ್ನು ಮುನ್ನಡೆಸಿ ಸಮಗ್ರ ಭಾರತವೇ ಹೆಮ್ಮೆ ಪಡುವಂತಹ ಇತ್ತೀಚೆಗೆ ನಡೆದ ‘ಆಪರಷನ್ ಸಿಂಧೂರ’ದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸುಬೇದಾರ್ ಪದ್ಮನಾಭ ಗೌಡರನ್ನು ಮಳುವೇಲು ಕುಟುಂಬ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿತು. ಮಳುವೇಲು ಚೆನ್ನಪ್ಪ ಮತ್ತು ಉಮ್ಮಕ್ಕ ದಂಪತಿಗಳ ಸುಪುತ್ರನಾಗಿರುವ ಗೌಡರು ಪಾಕಿಸ್ತಾನದ ವಿರುದ್ಧ ಬಾರತ ಹೂಡಿದ್ದ ರಕ್ಷಣಾತ್ಮಕ ಯುದ್ಧ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಪುತ್ತೂರು ಹೆಮ್ಮೆ ಪಡುವಂತಹ ವಿಚಾರವಾಗಿದೆ.
ವಾಘಾ ಗಡಿಯಲ್ಲಿ ಮೇ 6ರ ರಾತ್ರಿ ಗಂಟೆ 1
ನಾವೆಲ್ಲಾ ಮಾಧ್ಯಮಗಳಲ್ಲಿ ನೋಡಿದಂತೆ, ಓದಿದಂತೆ ಪಾಕಿಸ್ತಾನದ ದುಷ್ಕೃತ್ಯಕ್ಕಾಗಿ ತಕ್ಕ ಪಾಠ ಕಲಿಸಲು ರೂಪುಗೊಂಡದ್ದೇ ‘ಆಪರೇಷನ್ ಸಿಂದೂರ್’. ಇದರ ಹಿಂದೆ ವಿವಿಧ ಸೇನಾ ವಿಭಾಗಗಳ ಜೊತೆಗೆ ತೆರೆಮರೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಿ.ಎಸ್.ಎಫ್. (ಬೋರ್ಡರ್ ಸೆಕ್ಯೂರಿಟಿ ಪೋಸ್ಟ್). 2025ರ ಮೇ ತಿಂಗಳ ರಾತ್ರಿ ಗಂಟೆ 1ರ ಸುಮಾರಿಗೆ ಜನ ಸಾಮಾನ್ಯ ಭಾರತೀಯರು ಗಾಢ ನಿದ್ರೆಯಲ್ಲಿದ್ದರೆ ಪಂಜಾಬ್ ನ ಬಿ.ಎಸ್.ಎಫ್.ಗೆ ಬಂದಿತ್ತು ತುರ್ತು ಮಾಹಿತಿ. ಪಾಕ್ ನೆಲದಲ್ಲಿನ ಉಗ್ರರ ಹುಟ್ಟಡಗಿಸುವ ದೃಢ ಸಂಕಲ್ಪ ಮಾಡಿದ್ದ ಭಾರತಕ್ಕೆ ಕರೆದ ನಿಮಿಷದಲ್ಲೇ ತಯಾರಾಗಿತ್ತು ಬಿ.ಎಸ್.ಎಫ್. ಪಾಕ್ ಕಡೆಯಿಂದ ನುಗ್ಗಿ ಬರುತ್ತಿದ್ದ ಡ್ರೋನ್ ಗಳು ಮತ್ತು ಕ್ಷಿಪಣಿಗಳನ್ನು ನಮ್ಮ ಸಮರ್ಥ ರಕ್ಷಣಾ ಪಡೆ ಹೊಡೆದುರುಳಿಸುತ್ತಿದ್ದರೆ ವಾಘಾ ಗಡಿಯಲ್ಲಿ ಇಂಚಿಂಚೂ ಭಾರತೀಯ ನೆಲವನ್ನು ಸರ್ಪಗಾವಲಿಟ್ಟು ಕಾಯುತ್ತಿದ್ದ ಬಿ.ಎಸ್.ಎಫ್. ಅತಿ ಜಾಗೃತ ಸ್ಥಿತಿಯಲ್ಲಿ ಕಾರ್ಯೋನ್ಮುಖವಾಗಿತ್ತು. ಬಿ.ಎಸ್.ಎಫ್. 148 ಕಂಪೆನಿಯ ಕಮಾಂಡೆಂಟ್ ಆಗಿ ತನ್ನ ವ್ಯಾಪ್ತಿಯ 150ಕ್ಕೂ ಹೆಚ್ಚಿನ ಸಂಖ್ಯೆಯುಳ್ಳ ಪಡೆಯನ್ನು ಆ ಕರಿ ರಾತ್ರಿಯಲ್ಲಿ ದಿಟ್ಟತನದಿಂದ ಮುನ್ನಡೆಸುತ್ತಿದ್ದವರು ನಮ್ಮ ಪುತ್ತೂರಿನ ಪದ್ಮನಾಭ ಗೌಡರು.
ಉದ್ವಿಗ್ನ 8 ದಿನಗಳು
‘ಆಪರೇಷನ್ ಸಿಂದೂರ’ ಆರಂಭವಾದಂದಿನಿಂದ ನಿರಂತರ 8 ದಿನಗಳ ಕಾಲ 24×7 ಎಂಬಂತೆ ಉದ್ವಿಗ್ನತೆಯೊಂದಿಗೆ ಗಡಿಕಾಯ್ದು ಬಿ.ಎಸ್.ಎಫ್.ನ ಹೆಮ್ಮೆಯ ಭಾಗವಾಗಿದ್ದ ಪದ್ಮನಾಭ ಮತ್ತವರ ತಂಡಕ್ಕೆ ನಿರಂತರ 8 ದಿನಗಳ ಕಾಲ ವಿರಾಮವೆಂಬುದಿರಲಿಲ್ಲ! ಟಿ.ವಿ. ಪರದೆಯ ಮೇಲೆ ನಾವೂ-ನೀವೂ ನೋಡುತ್ತಿದ್ದ ದೃಶ್ಯಗಳನ್ನು ಇವರು ನೈಜವಾಗಿ ಯುದ್ಧ ಮುಖಜ ಭೂಮಿಯಲ್ಲಿ ಎದುರಿಸುತ್ತಿದ್ದರು ಎಂಬುದು ರಣ ರೋಚಕ ಸಂಗತಿ.
ಅದರಲ್ಲೂ ಪಾಕಿಸ್ತಾನ ಕಡೆಯಿಂದ ಪದ್ಮನಾಭರ ಕ್ಯಾಂಪನ್ನು ಕಡೆಗೆ ನಿರಂತರವಾಗಿ ಹಾರಿ ಬರುತ್ತಿದ್ದ ಡ್ರೋನ್ ಮತ್ತು ಕ್ಷಿಪಣಿಗಳು ಯಮ ಕಿಂಕರರಂತೆಯೇ ಗೋಚರಿಸುತ್ತಿದ್ದವು. ಅಂತಹ ಅಪಾಯಕಾರಿಯಾದ ಸನ್ನಿವೇಶದಲ್ಲಿ ಹೋರಾಡಿದವರಲ್ಲಿ ಪದ್ಮನಾಭ ಗೌಡರು ಒಬ್ಬರು.
ಎಳವೆಯಲ್ಲಿಯೇ ಯೋಧನಾಗುವ ಕನಸು
ಪದ್ಮನಾಭ ಗೌಡರು ಹುಟ್ಟೂರು ಬೆಳ್ಳಿಪ್ಪಾಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಪುತ್ತೂರಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಸೇರಿಕೊಂಡದ್ದು ವಿವೇಕಾನಂದ ಪದವಿ ಪೂರ್ವ ಕಾಲೇಜನ್ನು. ಅಲ್ಲಿ ಎನ್.ಸಿ.ಸಿ. ಸೇರಿಕೊಂಡ ಅವರಿಗೆ ಮೊದಲೇ ತನ್ನೊಳಗೆ ಜಾಗೃತವಾಗಿದ್ದ ‘ಯೂನಿಫಾರ್ಮ್, ದೇಶ ಸೇವೆ, ಸೇನೆ …..’ ಎಂಬಿತ್ಯಾದಿ ಕನಸುಗಳು ಚಿಗುರತೊಡಗಿದವು. ಅಲ್ಲಿಂದ ಹಿಂತಿರುಗಿ ನೋಡದೇ ದೇಶ ಸೇವೆಗಾಗಿ ತನ್ನ ಜೀವನವನ್ನು ಮುಡಿಪಿಡುವ ಗಟ್ಟಿ ನಿರ್ಧಾರ ಮಾಡಿದವರು ಪದ್ಮನಾಭರು.
ಕುಟುಂಬ ಮತ್ತು ಊರವರ ಅಣಕ
ಲಾಗಾಯ್ತಿನಿಂದಲೇ ಮಳುವೇಲು ಕುಟುಂಬ ಭೂ ಒಡೆತನ ಹೊಂದಿತ್ತು. ಅಂತಹ ಕುಟುಂಬದಿಂದ ಪೂರ್ವಾಪರ ಇಲ್ಲದ ಓರ್ವ ಹುಡುಗ ಸೇನೆ ಸೇರಲು ಹೊರಟಾ ಕುಟುಂಬದ ಕೆಲವರೊಂದಿಗೆ ಊರಿನ ಹಲವರು ‘ಮಳುವೇಲುನವರಿಗೆ ಬೇಕಾದಷ್ಟು ಭೂಮಿ ಇದೆ. ಅದನ್ನು ಕೃಷಿ ಮಾಡುವುದನ್ನು ಬಿಟ್ಟು ಸೇನೆಗೆ ಹೋಗುವ ಕೆಲಸ ಯಾಕೆ?’ ಎಂದು ಅಣಕಿಸಿದವರೇ ಹೆಚ್ಚು. ಆದರೆ ಗೌಡರೊಳಗಿದ್ದ ದೇಶಸೇವೆಯ ಕಿಚ್ಚು ಅದೆಲ್ಲವನ್ನೂ ಮೀರಿ ಅವರನ್ನು ಬಿ.ಎಸ್.ಎಫ್. ಕ್ಯಾಂಪ್ನೊಳಗೆ ಕರೆದೊಯ್ದಿತ್ತು.
ಬಿ.ಎಸ್.ಎಫ್.ನಲ್ಲಿ ಸೇವೆ
1985ರಲ್ಲಿ ಸಾಮಾನ್ಯ ಯೋಧನಾಗಿ ಬಿ.ಎಸ್.ಎಫ್. ಸೇರಿದ ಪದ್ಮನಾಭರು ಹವಾಲ್ದಾರ್, ಲ್ಯಾನ್ಸ್ ನಾಯಕ್ ಹುದ್ದೆಗಳನ್ನು ದಾಟಿ ಸುಬೇದಾರ್ ಆದರು. ಈ ಮಧ್ಯೆ ಹವಾಲ್ದಾರ್ ಹುದ್ದೆಯಲ್ಲಿರುವಾಗ ಬೆಂಗಳೂರಿನಲ್ಲಿರುವ ಬಿ.ಎಸ್.ಎಫ್.ನ ಸೇನಾ ತರಬೇತಿ ಶಾಲೆಯಲ್ಲಿ 6 ವರ್ಷಗಳ ಕಾಲ ತರಬೇತಿ/ಅಧ್ಯಾಪನವನ್ನೂ ಮಾಡಿದ್ದರು.
ಸುಂದರ ಸಂಸಾರ
ಮಳುವೇಲಿನ ಪದ್ಮನಾಭ ಗೌಡರದು ಪತ್ನಿ ಸುಮಾ, ಹಿರಿಯ ಮಗ ನಿಕ್ಷಿತ್ ಮತ್ತು ಕಿರಿಯ ಮಗ ನೇಹಲ್ರವರೊಂದಿಗಿನ ಸುಂದರ ಸಂಸಾರ. ಹಿರಿಯಾತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯ ಕೊನೆಯ ಹಂತದಲ್ಲಿದ್ದರೆ ಕಿರಿಯಾತ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಮುಂದಿನ ವ್ಯಾಸಂಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಕುಟುಂಬದ ಅಭಿನಂದನೆ 58 ವರ್ಷ ವಯಸ್ಸಿನ ಪದ್ಮನಾಭರಿಗೆ ಇಂದು ತನ್ನ ಕುಟುಂಬವಾದ ಮಳುವೇಲಿನ ಮಂದಿಯಿಂದ ಆಪ್ತ ಸಮ್ಮಾನ, ಅಭಿನಂದನೆ ದೊರಕಿತು. ಮಳುವೇಲು ಜಿನ್ನಪ್ಪ ಗೌಡರು ಅಧ್ಯಕ್ಷತೆ ವಹಿಸಿದ್ದ ಸರಳ ಆತ್ಮೀಯ ಕಾರ್ಯಕ್ರಮದಲ್ಲಿ ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಕೆ. ಅವರು ಅಭಿನಂದನಾ ನುಡಿಗಳನ್ನಾಡಿದರು. ಉಮೇಶ್ ಮಳುವೇಲು ಸ್ವಾಗತಿಸಿ ಶ್ರೀಮತಿ ಯಶೋದಾ ಕೃತಜ್ಞತೆ ಸಮರ್ಪಿಸಿದರು.