ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ಅಲ್ಲಲ್ಲಿ ಗುಡ್ಡೆ ಕುಸಿದು ಸಂಚಾರಕ್ಕೆ ಅಡಚಣೆ
ಮಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು, ಮಂಗಳೂರನ್ನು ಬೆಂಗಳೂರಿಗೆ ಸಂಪರ್ಕಿಸುವ ಚಾರ್ಮಾಡಿ ಮತ್ತು ಶಿರಾಡಿ ಘಾಟಡಿಯಲ್ಲಿ ಈ ವರ್ಷವೂ ಭೂಕುಸಿತದ ಭೀತಿ ಎದುರಾಗಿದೆ. ಈ ವರ್ಷ ಮುಂಗಾರಿನ ಮೊದಲ ಮಳೆಗೆ ಹತ್ತಾರು ಕಡೆ ಭೂಕುಸಿತಗಳು ಸಂಭವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಸೋಮವಾರ ಚಾರ್ಮಾಡಿ ಘಾಟಿಯ ಬಿದಿರುತಳ ಮತ್ತು ಅಲೆಕಾನ್ ಮಧ್ಯೆ ಭೂಕುಸಿತವಾಗಿ ಹಲವು ತಾಸು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಂತೆಯೇ ಭೂ ಕುಸಿತ ಸಂಭವಿಸಿದೆ.

ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮಾರ್ಗದಲ್ಲಿ ಭಾನುವಾರ ಹಲವು ಕಡೆ ಗುಡ್ಡ ಕುಸಿದು ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಆನೆಮಹಲ್ ಬಳಿ ಹೆದ್ದಾರಿಯ ಬದಿಯ ಮಣ್ಣು ಕುಸಿದು ರಸ್ತೆ ಮಣ್ಣಿನಿಂದ ಆವೃತವಾಗಿತ್ತು. ಇದೇ ಮಾರ್ಗದ ಅಡ್ಡನಗುಡ್ಡ, ದೊಡ್ಡತಪ್ಲು ಬಳಿ ಕೂಡ ಅತಿಯಾದ ಮಳೆಯಿಂದ ಧರೆ ಕುಸಿದು ರಸ್ತೆ ಸಂಚಾರವೇ ಬಂದ್ ಆಗುವ ಭೀತಿ ಎದುರಾಗಿದೆ.
ಅತಿಯಾದ ವಾಹನ ದಟ್ಟಣೆಯಿಂದ ಭಾನುವಾರ ಕೆಲ ಕಾಲ ಸಂಚಾರದ ಮಾರ್ಗವನ್ನೇ ಬದಲಾಯಿಸಲಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದ ಸಕಲೇಶಪುರ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಮಲ್ನಾಡ್ ಕೆಫೆ ಹೊಟೆಲ್ ಗೋಡೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಮತ್ತು ಶಿರಾಡಿ ಘಾಟಿಯಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಘಾಟಿಗಳಲ್ಲಿ ರಾತ್ರಿ ಹೊತ್ತು ಮಂಜು ಮುಸುಕಿದ ವಾತಾವರಣ ಇರುವುದರಿಂದ ರಸ್ತೆ ಗೋಚರತೆ ಕಡಿಮೆಯಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ರಾತ್ರಿ ಪ್ರಯಾಣವನ್ನು ತಪ್ಪಿಸಬೇಕೆಂದು ಮುನ್ನೆಚ್ಚರಿಕೆ ನೀಡಿದೆ.
egzpby