ಮತ್ತೆ ಟೆಸ್ಟಿಂಗ್, ಮಾಸ್ಕ್, ಐಸೋಲೇಷನ್ ನಿಯಮಗಳು ಶುರು
ನವದೆಹಲಿ: ಕೊರೊನ ಸೋಂಕು ಮೂರು ವರ್ಷಗಳ ಮತ್ತೆ ದೇಶಕ್ಕೆ ಕಾಲಿಟ್ಟಿದೆ. 2022ರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಒಮಿಕ್ರಾನ್ ತಳಿಯ ಜೆಎನ್1 ಪ್ರಭೇದ ಮತ್ತೆ ಹಾವಳಿ ಶುರು ಮಾಡಿದೆ.
ಜೆಎನ್1 ಉಪ ತಳಿಗಳಾದ ಎನ್‌ಬಿ.1.8.1 ಮತ್ತು ಎಲ್‌ಎಫ್.7 ತಳಿಗಳ ಕಾಟ ಶುರುವಾಗಿದೆ. ಸಿಂಗಾಪುರ, ಹಾಂಕಾಂಗ್, ಥೈಲ್ಯಾಂಡ್ ಸೇರಿ ದಕ್ಷಿಣ ಏಷ್ಯಾದಲ್ಲಿ ಕಾಣಿಸಿಕೊಂಡಿರುವ ವೈರಾಣು ಭಾರತಕ್ಕೂ ಕಾಲಿಟ್ಟಿದ್ದು, ಹಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದೆ. ಕರ್ನಾಟಕದಲ್ಲಿ ಒಟ್ಟು 35 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲೇ 32 ಆ್ಯಕ್ಟಿವ್ ಕೇಸ್ ಇವೆ. 9 ತಿಂಗಳ ಮಗು ಸೇರಿ 3 ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿದೆ. ನಿನ್ನೆ ಓರ್ವ ವ್ಯಕ್ತಿ ಕೊರೊನಕ್ಕೆ ಬಲಿಯಾಗುದ್ದಾರೆ. ಮತ್ತೆ ಟೆಸ್ಟಿಂಗ್, ಮಾಸ್ಕ್, ಐಸೋಲೇಷನ್ ಇತರ ಕೋವಿಡ್ ನಿಯಮಗಳು ಶುರುವಾಗಿವೆ.
ರಾಜ್ಯ ಸರ್ಕಾರ ಕೂಡ ಅಲರ್ಟ್ ಆಗಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದೆ. ಸೋಮವಾರದಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸ್ಕ್ ಧರಿಸಿಯೇ ಜನತಾ ದರ್ಶನ ನಡೆಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಎನ್‌ಬಿ.1.8.1 ತಮಿಳುನಾಡಿನಲ್ಲಿ ಪತ್ತೆಯಾಗಿತ್ತು. ಗುಜರಾತ್‌ನಲ್ಲಿ 4 ಎಲ್‌ಎಫ್.7 ಇದೇ ತಿಂಗಳಲ್ಲಿ ಪತ್ತೆಯಾಗಿತ್ತು.
ಜ್ವರ, ನೆಗಡಿ, ಕೆಮ್ಮು, ಆಯಾಸ, ತಲೆನೋವು, ಉಸಿರಾಟದ ತೊಂದರೆ ಇವೇ ಮಾಮುಲು ಲಕ್ಷಣಗಳು ಈ ಕೊರೊನ ತಳಿಯಲ್ಲೂ ಇವೆ, ಜನರು ಇಂಥ ಲಕ್ಷಣ ಕಾಣಿಸಿಕೊಂಡರೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜು ಜಿಲ್ಲಾಸ್ಪತ್ರೆಗಳಲ್ಲಿ ಭಾನುವಾರದಿಂದಲೇ ಟೆಸ್ಟಿಂಗ್ ಶುರು ಮಾಡಲು ಮುಂದಾಗಿದೆ. ಜೊತೆಗೆ 8 RTPCR ಟೆಸ್ಟಿಂಗ್ ಲ್ಯಾಬ್ ತೆರೆಯಲು ನಿರ್ಧರಿಸಿದೆ. ಜನದಟ್ಟಣೆ ಪ್ರದೇಶದಲ್ಲಿ ಜನರು, ಗರ್ಭಿಣಿಯರು, ಕಾಯಿಲೆ ಇರುವವರು ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಐಎಲ್‌ಐ, ಸ್ಯಾರಿ ಲಕ್ಷಣ ಇದ್ದರೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದ್ದು, ಸ್ಯಾನಿಟೈಸರ್ ಬಳಸುವಂತೆ ಎಚ್ಚರಿಕೆ ನೀಡಿದೆ.
ಬೆಳಗಾವಿಯ 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್‌ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಮುಂದಾಗಿದ್ದಾರೆ. ದೇಶಾದ್ಯಂತ 398 ಕೇಸ್ ದಾಖಲಾಗಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಕೇಸ್ ಪತ್ತೆ ಆಗುತ್ತಿವೆ. ಪಕ್ಕದ ಕೇರಳದಲ್ಲಿ ಅತಿಹೆಚ್ಚು 273 ಪ್ರಕರಣಗಳು ಪತ್ತೆ ಆಗಿವೆ. ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಅಲರ್ಟ್ ಆಗಿ ಹೊಸ ವೇರಿಯಂಟ್ ಎದುರಿಸಲು ಮುಂಜಾಗ್ರತಾ ಕ್ರಮ ವಹಿಸಲು ಸಜ್ಜಾಗುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಆಂಧ್ರಪ್ರದೇಶ, ದೆಹಲಿ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಸಜ್ಜುಗೊಳಿಸುವಂತೆ ಸೂಚಿಸಿದೆ.