ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು: ಸೀತಾರಾಮ ಕೇವಳ | ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಕಡಬ: ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಶನಿವಾರ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮಾತನಾಡಿ, ವಿದ್ಯಾರ್ಥಿಗಳು ಗುರುಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಿದಾಗ ನಿಜವಾದ ಗುರುಕಾಣಿಕೆ ನೀಡಿದಂತಾಗುತ್ತದೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯವಾಗಬೇಕು. ಇಲ್ಲಿ ಕಾಲೇಜಿನ ಅಭಿವೃದ್ಧಿ ಮಂಡಳಿ ಬೆವರಿಳಿಸಿ ದುಡಿದು ಗಳಿಸಿದ ಸ್ವಂತ ಸಂಪಾದನೆಯ ಒಂದು ಭಾಗವನ್ನು ಕಾಲೇಜಿನ ಬಿಸಿ ಊಟದ ವ್ಯವಸ್ಥೆಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಾದ ನೀವು ದುಡಿದು ಗಳಿಸಿ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಬೇಕು. ಸಮಯವನ್ನು ಗೌರವಿಸದವರನ್ನು ಸಮಾಜ ಗೌರವಿಸುವುದಿಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಮಂಗಳೂರು ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸೊರಕೆ ಮಾತನಾಡಿ, ಅವಕಾಶಗಳನ್ನು ಸದಪಯೋಗಪಡಿಸಿದರೆ ಸಾಧನೆ ಸಾಧ್ಯ ಎಂದರು.



















































 
 

ಮತ್ತೋರ್ವ ಮುಖ್ಯ ಅತಿಥಿಯಾಗಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ಮಾತನಾಡಿ, ನಾವು ಉದ್ಯೋಗ ಕೇಳುವವರ ಬದಲಾಗಿನಾವೇ ಉದ್ಯೋಗ ಸೃಷ್ಟಿಸುವವರಾಗಬೇಕೆಂದು ಎಂದರು.

 ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬೈತಡ್ಕ ಶೀನಪ್ಪ ಗೌಡರು ಕಾಲೇಜಿನ ಅಭಿವೃದ್ಧಿಯ ಇತಿಹಾಸವನ್ನು ನೆನಪಿಸಿಕೊಂಡರು. ಆಡಳಿತ ಮಂಡಳಿಯ ಮತ್ತೋರ್ವ ಸದಸ್ಯ ವೆಂಕಟೇಶ್ ಕೊಯಕ್ಕುಡೆ ಆಡಳಿತ ಮಂಡಳಿಯವರು ಬಿಸಿ ಊಟದ ವ್ಯವಸ್ಥೆಗೆ ಪಡುತ್ತಿರುವ ಶ್ರಮವನ್ನು ವಿಶದಪಡಿಸಿದರು.

ಆಡಳಿತ ಮಂಡಳಿ ಸದಸ್ಯ ಸತೀಶ್ ಮಾರ್ಕಜೆ ಶುಭ ಹಾರೈಸಿದರು. ಪೋಷಕರ ಪರವಾಗಿ ಮಾತನಾಡಿದ ವೇಣುಗೋಪಾಲ್ ಕಳುವಾಜೆ, ಪೋಷಕ ವರ್ಗದ ಸಂಪೂರ್ಣ ಬೆಂಬಲವಿರುವ ಬಗ್ಗೆ ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ ಭಟ್ ಪಿ.ಯವರು ಆರಂಭದಲ್ಲಿ ವರದಿ ವಾಚಿಸಿ ಬಳಿಕ ಮಾತನಾಡಿ, ಅತಿಥಿಗಳ ನುಡಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದೆ ಎಂದರು.

ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ಮಹೇಶ್ ಬಿ.ಎಸ್. ಸ್ವಾಗತಿಸಿ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ವಿನುತ ವಿ.  ವಂದಿಸಿದರು. ಪ್ರಾಧ್ಯಾಪಕಿ ವಿನುತಾಶ್ರೀ ಡಿ.ಬಿ. ಸಾಂಸ್ಕೃತಿಕ ಮತ್ತು ಕ್ರೀಡಾ ಬಹುಮಾನ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ತೃತೀಯ ಬಿಬಿಎ ತರಗತಿಯ ಚಂದ್ರಿಕಾ ಮತ್ತು ತೃತೀಯ ಬಿಎ ತರಗತಿಯ ಹೇಮಂತ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಸೀತಾರಾಮ ಗೌಡ ಮುಂಡಾಳ ಮತ್ತು ವಿದ್ಯಾಭಿಮಾನಿಗಳಾದ ಕುಶಾಲಪ್ಪ ಗೌಡ ದೈಪಿಲ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಲಿಖಿತ ಬಿ.ಎಚ್. ಮತ್ತು ಪೃಥ್ವಿ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆದು ವಿದ್ಯಾರ್ಥಿಗಳ ಮನರಂಜನೆಗಳೊಂದಿಗೆ ಆಚರಣೆ ಮುಕ್ತಾಯವಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top