ಸಿಂಧು ನದಿ ನೀರಿಗಾಗಿ ಪರಿತಪಿಸುತ್ತಿರುವ ಪಾಕಿಸ್ಥಾನ
ಇಸ್ಲಾಮಾಬಾದ್: ಕದನ ವಿರಾಮಕ್ಕೆ ಅಂಗಲಾಚಿದ್ದ ಪಾಕಿಸ್ತಾನ ಪರಿಸ್ಥಿತಿ ತುಸು ಸಹಜ ಸ್ಥಿತಿ ಬರುತ್ತಿರುವಂತೆಯೇ ತನ್ನ ಕಂತ್ರಿ ಬುದ್ಧಿ ತೋರಿಸಲಾರಂಭಿಸಿದೆ. ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಯೋತ್ಪಾದಕ ಹಫೀಜ್ ಸಯೀದ್‌ನಂತೆ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಭಾರತ ನೀರು ನೀಡದಿದ್ದರೆ ನಾವು ಅವರ ಉಸಿರು ನಿಲ್ಲಿಸುತ್ತೇವೆ ಎಂಬ ಗೊಡ್ಡು ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ ಭಾಷಣ ಮಾಡುವಾಗ ಅಹ್ಮದ್ ಷರೀಫ್ ಚೌಧರಿ ಬೇಕಾಬಿಟ್ಟಿ ಹೇಳಿಕೆ ನೀಡಿದ್ದಾನೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದುಗೊಳಿಸಿದೆ. ಪಾಕಿಸ್ತಾನ ಹಲವು ಬಾರಿ ಈ ಕುರಿತು ಮಾತನಾಡುವಂತೆ ಭಾರತಕ್ಕೆ ಮನವಿ ಮಾಡಿತ್ತು. ಆದರೆ ಭಾರತ ನದಿ ನೀರಿನ ಹಂಚಿಕೆಗೆ ನಿರಾಕರಿಸಿದೆ. ಇದೀಗ ಪಾಕ್ ಸೇನಾ ವಕ್ತಾರ ಭಾರತ ನೀರು ನೀಡದಿದ್ದರೆ ನಾವು ಅವರ ಉಸಿರು ನಿಲ್ಲಿಸುತ್ತೇವೆ ಎಂದು ಹೇಳಿದ್ದಾನೆ.
ಈ ಹಿಂದೆ ಪಾಕಿಸ್ತಾನ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ ಸಿಂಧೂ ನದಿ ಇಸ್ಲಾಮಾಬಾದ್‌ಗೆ ಸೇರಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದ್ದರು. ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಝರ್ದಾರಿ, ಭಾರತವು ತನ್ನ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ಜನರನ್ನು ಮೂರ್ಖರನ್ನಾಗಿಸಲು ಇಸ್ಲಾಮಾಬಾದ್ ಅನ್ನು ದೂಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆರೋಪಗಳನ್ನು ಮಾಡಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳು 1960ರಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಕ್ಕೆ ಸಾಕ್ಷಿಯಾಗಿ ವಿಶ್ವ ಬ್ಯಾಂಕ್ ಕೂಡ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಎರಡೂ ದೇಶಗಳ ನಡುವೆ ಸಮಾನವಾಗಿ ಹಂಚಲು ತೀರ್ಮಾನಿಸಲಾಯಿತು. ಮೂರು ಪೂರ್ವ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್‌ನಿಂದ ಭಾರತಕ್ಕೆ ಮತ್ತು ಮೂರು ಪಶ್ಚಿಮ ನದಿಗಳಾದ ಚೆನಾಬ್, ಸಿಂಧೂ ಮತ್ತು ಝೀಲಂನಿಂದ ಪಾಕಿಸ್ತಾನಕ್ಕೆ ಸಿಂಧೂ ನದಿಯ ನೀರನ್ನು ಹಂಚಲಾಯಿತು. ಇದೀಗ ಭಾರತ ಪಾಕಿಸ್ತಾನಕ್ಕೆ ನೀರು ಹರಿಸದಿರಲು ನಿರ್ಧರಿಸಿದೆ.