ಬಡಜನರ ಆರೋಗ್ಯಕ್ಕೆ ಮರಣ ಶಾಸನ ಬರೆದ ಸರ್ಕಾರ : ಕ್ಯಾ.ಬ್ರಿಜೇಶ್‌ ಚೌಟ

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳ ಸ್ಥಗಿತಕ್ಕೆ ಆಕ್ರೋಶ

ಮಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುವ ಕಾಂಗ್ರೆಸ್ ಸರ್ಕಾರದ ನಡೆಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆದೇಶದ ಮೂಲಕ ಸಿದ್ದರಾಮಯ್ಯ ಸರ್ಕಾರ ಬಡಜನರ ಆರೋಗ್ಯಕ್ಕೆ ಮರಣ ಶಾಸನ ಬರೆದು ಅವರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲು ಹೊರಟಿದೆ ಎಂದಿದ್ದಾರೆ.

ದೇಶಾದ್ಯಂತ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಜನರಿಗೆ ಗುಣಮಟ್ಟದ ಔಷಧ ಒದಗಿಸುತ್ತಿವೆ. ಕರ್ನಾಟಕದಲ್ಲಿಯೂ ನೂರಾರು ಜನೌಷಧಿ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಂಟು ನೆಪ ಹೇಳಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮುಚ್ಚಿಸುವ ಮೂಲಕ ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಕೇಂದ್ರಗಳು ಉದ್ಯೋಗ ಸೃಷ್ಟಿಯಲ್ಲೂ ಮಹತ್ವದ ಪಾತ್ರ ವಹಿಸಿವೆ. ಜನೌಷಧಿ ಕೇಂದ್ರಗಳನ್ನು ನಡೆಸುವ ಮೂಲಕ ಅನೇಕರು ಸ್ವಯಂ ಉದ್ಯೋಗಿಗಳಾಗಿದ್ದು, ಇತರರಿಗೂ ಕೆಲಸ ನೀಡುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರ ನೂರಾರು ಕುಟುಂಬಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ. ಇದು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನ ಎಂದು ಆರೋಪಿಸಿದ್ದಾರೆ.



















































 
 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯುಳ್ಳ ಪಿಎಂಬಿಜೆಪಿ ಯೋಜನೆಯಡಿ ಜನೌಷಧಿ ಕೇಂದ್ರಗಳಲ್ಲಿ ಶೇ.70ರಿಂದ 90 ರಷ್ಟು ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧಿಗಳು ದೊರಕುತ್ತಿವೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಔಷಧ ಒದಗಿಸುತ್ತಿರುವ ಈ ಕೇಂದ್ರಗಳನ್ನು ಮುಚ್ಚುವ ಅಗತ್ಯವೇನಿದೆ? ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿಗಳು ಮತ್ತು ಖಾಸಗಿ ಮೆಡಿಕಲ್ ಶಾಪ್‌ಗಳ ಲಾಬಿಗೆ ಮಣಿದು ಈ ನಿರ್ಧಾರ ತೆಗೆದುಕೊಂಡಿದೆಯೇ ಅಥವಾ ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸಿಗುತ್ತಿರುವ ಜನಮನ್ನಣೆ ಸಹಿಸಲಾಗದೆ ಜನರ ಆರೋಗ್ಯ ವಿಚಾರದಲ್ಲಿಯೂ ಕೊಳಕು ಮನಸ್ಥಿತಿಯ ರಾಜಕೀಯ ಮಾಡಲು ಹೊರಟಿದೆಯೇ ಎಂದು ಕ್ಯಾ.ಚೌಟ ಪ್ರಶ್ನಿಸಿದ್ದಾರೆ.

ಜನೌಷಧಿ ಕೇಂದ್ರಗಳು ಬಡವರ ಪಾಲಿನ ವರದಾನ. ಆದರೆ ಬಡವರ ಆರೋಗ್ಯದಲ್ಲೂ ರಾಜಕೀಯ ಮಾಡುವ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್ಸಿಗ ಜನರೇ ಬುದ್ಧಿ ಕಲಿಸುವ ದಿನ ದೂರವಿಲ್ಲ. ರಾಜ್ಯ ಸರ್ಕಾರ ಕಾಣದ ಕೈಗಳ ಹಿತಾಸಕ್ತಿಗಾಗಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಅನುಮಾನ ಮೂಡಿಸಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top