ಪುತ್ತೂರು: ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ (61) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಬೂತ್ ಅಧ್ಯಕ್ಷರಾಗಿ ಪ್ರಸ್ತುತ ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರದ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕುಂಬ್ರ ಅಂಗನವಾಡಿಯ ಬಾಲವಿಕಾಸ ಸಮಿತಿ ಸದಸ್ಯರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬ್ರ ವಲಯ ಅಧ್ಯಕ್ಷರಾಗಿ, ಸಂಟ್ಯಾರು ಕಲ್ಲಕಟ್ಟಿ ಶ್ರೀ ರಾಜಗುಳಿಗೆ ಸಾನಿಧ್ಯ ಸಮಿತಿ, ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರು ತಾಯಿ, ಪತ್ನಿ, ಸಹೋದರಿಯರು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.