ಯೂಟ್ಯೂಬರ್‌ಗಳ ಮೂಲಕ ಆಯಕಟ್ಟಿನ ಸ್ಥಳಗಳ ಮಾಹಿತಿ ಸಂಗ್ರಹ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಐಎಸ್ಐ ಸಂಚನ್ನು ಭಾರತದ ಗುಪ್ತಚರ ಏಜೆನ್ಸಿಗಳು ವಿಫಲಗೊಳಿಸಿವೆ. ಮೂರು ತಿಂಗಳ ಯೋಜಿತ ಕಾರ್ಯಾಚರಣೆಯಲ್ಲಿ ಐಎಸ್ಐ ಯತ್ನವನ್ನು ವಿಫಲಗೊಳಿಸಿ, ದಾಳಿ ನಡೆಸಲು ತೀವ್ರ ತರಬೇತಿ ಪಡೆದ ಇಬ್ಬರನ್ನು ಬಂಧಿಸಲಾಗಿದೆ. ದಾಳಿ ನಡೆಸುವ ಹೊಣೆ ಹೊತ್ತಿದ್ದ ಪಾಕಿಸ್ತಾನದ ಅನ್ಸಾರುಲ್ ಮಿಯಾ ಅನ್ಸಾರಿ ಕೂಡಾ ಬಂಧಿತರಲ್ಲಿ ಸೇರಿದ್ದಾನೆ. ಈತ ಭಾರತ ಸಶಸ್ತ್ರ ಪಡೆಗಳ ಬಗ್ಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತಿದ್ದ ಎನ್ನಲಾಗಿದೆ.
ಈ ಕುರಿತ ತನಿಖೆ ಪಾಕಿಸ್ಥಾನದ ಹೈಕಮಿಷನ್‌ನ ಕೆಲ ಸಿಬ್ಬಂದಿಯತ್ತ ಕೂಡಾ ಸಂಶಯದ ದೃಷ್ಟಿ ಬೀರಿದೆ. ಐಎಸ್ಐ ಅಧಿಕಾರಿಗಳಾದ ಮುಝಮ್ಮಿಲ್ ಮತ್ತು ಇಷಾನುರ್ರಹಮಾನ್ ಅಲಿಯಾಸ್ ಡ್ಯಾನಿಷ್ ಭಾರತೀಯ ಯುಟ್ಯೂಬರ್‌ಗಳು ಮತ್ತು ಪ್ರಭಾವಿಗಳನ್ನು ಈ ಉದ್ದೇಶಕ್ಕೆ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಭಾರತದ ಸೂಕ್ಷ್ಮ ದಾಖಲೆಗಳು/ ಚಿತ್ರಗಳು/ ಗೂಗಲ್ ಮಾಹಿತಿಗಳನ್ನು ಕಲೆಹಾಕಲು ಐಎಸ್ಐ ಬೇಹುಗಾರರನ್ನು ನೇಪಾಳ ಮೂಲಕ ದೆಹಲಿಗೆ ಕಳುಹಿಸಿದೆ ಎಂಬ ಮಾಹಿತಿಯನ್ನು ಆಧರಿಸಿ ಕಳೆದ ಜನವರಿಯಲ್ಲಿ ಈ ಕಾರ್ಯಾಚರಣೆ ಆರಂಭವಾಗಿತ್ತು. ಈ ಸಂಚಿನಲ್ಲಿ ದೆಹಲಿಯ ಮೇಲೆ ದಾಳಿ ನಡೆಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಶಸ್ತ್ರ ಪಡೆಗಳ ವರ್ಗೀಕೃತ ಮಾಹಿತಿಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಸಂಚು ರೂಪಿಸಲಾಗಿತ್ತು.
ಆದರೆ ಗುಪ್ತಚರ ಅಧಿಕಾರಿಗಳು ಫೆಬ್ರವರಿ ಮಧ್ಯಭಾಗದವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ದೆಹಲಿಗೆ ಆಗಮಿಸಿದ ಐಎಸ್ಐ ಏಜೆಂಟ್ ಮಿಲಿಟರಿ ದಾಖಲೆಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ತಕ್ಷಣ ಬಲೆ ಬೀಸಿದ ಭದ್ರತಾ ಪಡೆಗಳು ಫೆಬ್ರವರಿ 15ರಂದು ಅನ್ಸಾರಿಯನ್ನು ನೇಪಾಳ ಮೂಲಕ ಪಾಕಿಸ್ಥಾನಕ್ಕೆ ಹಿಂದಿರುಗುವ ಮಾರ್ಗಮಧ್ಯದಲ್ಲಿ ಕೇಂದ್ರ ದೆಹಲಿಯಲ್ಲಿ ಸೂಕ್ಷ್ಮ ದಾಖಲೆಗಳ ಜತೆಗೆ ಬಂಧಿಸಲಾಗಿತ್ತು. ಈತನ ವಿರುದ್ಧ ರಹಸ್ಯ ದಾಖಲೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಂಚಿ ನಿವಾಸಿ ಅಖ್ಲಾಕ್ ಆಝಮ್ ಎಂಬಾತ ಕೂಡಾ ಇದರಲ್ಲಿ ಷಾಮೀಲಾಗಿರುವುದು ತನಿಖೆಯಿಂದ ಅನಾವರಣಗೊಂಡಿತ್ತು. ಇಬ್ಬರೂ ಪಾಕಿಸ್ಥಾನದ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು. ಆಝಮ್‌ನನ್ನು ಮಾರ್ಚ್‌ಲ್ಲಿ ಬಂಧಿಸಲಾಗಿತ್ತು. ಇವರ ಮೊಬೈಲ್ ಸಾಧನಗಳ ವಿಶ್ಲೇಷಣೆಯಿಂದ ಇಡೀ ಸಂಚು ಬಹಿರಂಗಗೊಂಡಿದೆ.