ಗೋಲ್ಡ್ ಸ್ಮಗ್ಲಿಂಗ್ ಆರೋಪಿ ರನ್ಯಾ ರಾವ್‌ಗಿರುವ ಸಂಬಂಧದ ಕುರಿತು ತನಿಖೆ
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಿನ್ನೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ ಬಳಿಕ ಈ ಸಂಸ್ಥೆಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಆರೋಪಿ ನಟಿ ರನ್ಯಾ ರಾವ್‌ಗೂ ಇರುವ ಸಂಬಂಧದ ಕುರಿತು ಚರ್ಚೆಗಳಾಗುತ್ತಿವೆ. ದಾಳಿ ಹಾಗೂ ಶೋಧ ಕಾರ್ಯ ಗುರುವಾರ ಬೆಳಗ್ಗೆಯೂ ಮುಂದುವರಿದಿದೆ. ದಾಳಿ ನಡೆಸಿ 24 ಗಂಟೆಗಳು ಕಳೆದರೂ ಇಡಿ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದ್ದು, ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಖಾತೆಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಭಾವಿ ವ್ಯಕ್ತಿಯೊಬ್ಬರ ಸೂಚನೆ ಮೇರೆಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಟ್ರಸ್ಟ್ ಮೂಲಕ ರನ್ಯಾ ರಾವ್ ಕ್ರೆಡಿಟ್ ಕಾರ್ಡ್‌ಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪವಿದೆ. ಇದರ ಆಧಾರದಲ್ಲಿ ಒಟ್ಟು 16 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಡಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುಮಕೂರಿನ ಕುಣಿಗಲ್ ರಸ್ತೆಯ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು, ಹೆಗ್ಗೆರೆ ಸಮೀಪದ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಕ್ಯಾತ್ಸಂದ್ರದ ಹೊಸ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು, ಈ ಮೂರು ಕಡೆ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬೆಳಗ್ಗೆ 9 ಗಂಟಗೆ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದರು. ಏಕಕಾಲದಲ್ಲಿ ತುಮಕೂರಿನ 3 ಕಡೆ ಸಹಿತ ಹಲವು ಕಡೆ ದಾಳಿ ನಡೆದಿತ್ತು. 40ಕ್ಕೂ ಅಧಿಕ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆಯ ಬೆನ್ನು ಬಿದ್ದು ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬಹುತೇಕ ಇಂದು ಇಡೀ ದಿನ ಶೋಧ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ.
2019ರಲ್ಲಿಯೂ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವೈದ್ಯಕೀಯ ಸೀಟು ಅಕ್ರಮ ಹಂಚಿಕೆ ಆರೋಪ ಸಂಬಂಧ ಐಟಿ ದಾಳಿ ನಡೆದಿತ್ತು. ಇದೀಗ ಹಣಕಾಸು ಅಕ್ರಮ ಮತ್ತು ರನ್ಯಾ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಇಡಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.