ಜನರು ತೆರಿಗೆ ಭಾರ ಹೊತ್ತಿರುವಾಗ ಕಾಂಗ್ರೆಸ್ ಸಾಧನಾ ಸಮಾವೇಶ ಎಂದು ಟೀಕೆ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ’ ಎಂಬ ಶೀರ್ಷಿಕೆಯಡಿ ಎಂಟು ಪುಟಗಳ ಆರೋಪ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕರಾದ ಕೆ.ಗೋಪಾಲಯ್ಯ, ಎಸ್.ರಘು, ಸಿ.ಕೆ.ರಾಮಮೂರ್ತಿ, ಮುಖಂಡರಾದ ಎಸ್.ಹರೀಶ್, ಮಾಳವಿಕಾ ಅವಿನಾಶ್, ಸಪ್ತಗಿರಿಗೌಡ ಅವರು ಜಂಟಿಯಾಗಿ ಆರೋಪಪಟ್ಟಿ ಬಿಡುಗಡೆಗೊಳಿಸಿದರು.
ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಈ ಆರೋಪಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಂಗಳೂರಿನಲ್ಲಿ ಉಡಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆ ಮಾಡಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಜನರ ಮೇಲೆ ತೆರಿಗೆ ಭಾರ ಹೊರೆಸಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ‘ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಎಂಬ ಬಿರುದು ನೀಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಜನರ ಸಾವಿನ ಮೇಲೆ ಸಾಧನೆಯ ಸಮಾವೇಶ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಕಿಸ್ಥಾನದ ಆರ್ಮಿ ಜನರಲ್ ಆಸಿಫ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಬಿರುದು ನೀಡಿದಂತೆಯೇ ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ದಿವಾಳಿ ಮಾಡಲ್ ಆಫ್ ಕರ್ನಾಟಕʼ ಎಂಬ ಬಿರುದು ನೀಡುತ್ತಿದ್ದೇವೆ. ಜನರು ತೆರಿಗೆ ಭಾರ ಹೊತ್ತಿರುವಾಗ ಕಾಂಗ್ರೆಸ್ ಸಮಾವೇಶ ಮಾಡಿದೆ ಎಂದು ಅರ್.ಅಶೋಕ್ ಟೀಕಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯಾಗಿದೆ. ಮುಡಾದಲ್ಲಿ 14 ಸೈಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸತ್ತಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಕ್ಕೆ ಸಮಾವೇಶ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು. ವಕ್ಫ್ ಮಂಡಳಿಯಿಂದ ರೈತರ ಜಮೀನು, ದೇವಾಲಯದ ಭೂಮಿ ಕಬಳಿಸಲಾಗಿದೆ. ಕೆಪಿಎಸ್‌ಸಿಯಿಂದ ನಡೆದ ಪರೀಕ್ಷೆಯಲ್ಲಾದ ತಪ್ಪಿನಿಂದ 2 ಲಕ್ಷ ಅಭ್ಯರ್ಥಿಗಳ ಜೀವನಕ್ಕೆ ಕೊಡಲಿ ಏಟು ಬಿದ್ದಿದೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ನಿಂದ ನೇಹಾ ಹತ್ಯೆಯಾಗಿದೆ.
ನಾಗಮಂಗಲದಲ್ಲಿ ಕೋಮು ಗಲಭೆ ನಡೆದಾಗ ಗಣೇಶನನ್ನೇ ಜೈಲಿಗೆ ಹಾಕಿದ್ದರು. ಮಳೆ ಬಂದು ಬೆಂಗಳೂರಿನಲ್ಲಿ ಐದು ಜನರು ಮೃತಪಟ್ಟಿದ್ದಾರೆ. ರಾಜಧಾನಿಯನ್ನು ತೇಲುತ್ತಿರುವ ಬೆಂಗಳೂರು ಮಾಡಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಿದ್ದಾರೆ, ಜೊತೆಗೆ ಸುಮಾರು 700 ಕೋಟಿ ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ. ಇವೆಲ್ಲ ಸಾಧನೆಗಳಿಗಾಗಿ ಸರ್ಕಾರ ಸಮಾವೇಶ ಮಾಡಿದೆ ಎಂದು ಟೀಕಸಿದ್ದಾರೆ. ಅವೈಜ್ಞಾನಿಕ ಗ್ಯಾರಂಟಿಗಳಿಗಾಗಿ 60 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ಸಾಲ ಮಾಡಲಾಗಿದೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಯಾರೂ ಕೇಳುವವರೇ ಇಲ್ಲ ಎಂದಿದ್ದಾರೆ.
ಗೃಹಸಚಿವರನ್ನು ಪ್ರಶ್ನಿಸಿದರೆ ಇದು ಆಕಸ್ಮಿಕ ಘಟನೆ, ಆರೋಪಿ ಮಾನಸಿಕ ಅಸ್ವಸ್ಥ ಎನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪಾಕಿಸ್ತಾನವನ್ನು ‘ನಮ್ಮ ಪಾಕಿಸ್ಥಾನʼ ಎಂದು ಹೇಳುತ್ತಾರೆ. ಭಯೋತ್ಪಾದನಾ ಕೃತ್ಯವನ್ನು ಸಣ್ಣದು ಎಂದು ಹೇಳುತ್ತಾರೆ. ಇಂತಹ ಕಾಂಗ್ರೆಸ್ ನಾಯಕರ ಬಂಡವಾಳ ಜನರ ಮುಂದೆ ಬಯಲಾಗಿದೆ ಎಂದು ಅಶೋಕ್ ಹೇಳಿದರು.
ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಮೋದಿ ಸರ್ಕಾರ ರೈಲ್ವೆಗೆ, ಕುಡಿಯುವ ನೀರಿಗೆ, ಹೆದ್ದಾರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ನಾವು ತಿಳಿಸುತ್ತೇವೆ. ಮನಮೋಹನ್ ಸಿಂಗ್ ಎಷ್ಟು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಲಿ. ತೆರಿಗೆ ಪಾವತಿಸುವುದು ಮಾನದಂಡ ಆಗುವುದಿಲ್ಲ. ಮೈಸೂರಿನ ಜನರು, ಬೆಂಗಳೂರಿನ ಜನರು ‘ನಮ್ಮ ತೆರಿಗೆ ನಮ್ಮ ಹಕ್ಕುʼ ಎಂದರೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.