ಪುತ್ತೂರು: ಹಿಟ್ ಆಂಡ್ ರನ್ ನಲ್ಲಿ ಅರಿಯಡ್ಕ ಗ್ರಾ. ಪಂ ಮಾಜಿ ಅಧ್ಯಕ್ಷೆ ಸವಿತಾ ಎಸ್.ರವರು ಗಾಯಗೊಂಡ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 275 ರ ಕುಂಬ್ರ ಸಮೀಪದ ಶೇಖಮಲೆಯಲ್ಲಿ ನಡೆದಿದೆ.
ಸವಿತಾರವರು ಚಲಾಯಿಸುತ್ತಿದ್ದ ಸ್ಕೂಟರ್ ಶೇಖಮಲೆ ಮಸೀದಿ ಹತ್ತಿರ ಟೆಂಪೋ ಟ್ರಾವೆಲ್ಲರ್ ವೊಂದು ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಪಲ್ಟಿಯಾಗಿದ್ದು ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದರು.
ಗಾಯಾಳುವನ್ನು ತಕ್ಷಣವೇ ಕುಂಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಮಡ್ಯಂಗಳರವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ದೃಶ್ಯ ಶೇಖಮಲೆ ಮಸೀದಿಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದ ಸಂದರ್ಭ ಅದೇ ರಸ್ತೆಯಲ್ಲಿ ಬರುತ್ತಿದ್ದ ಆನಂದ ಕೌಡಿಚಾರು ಎಂಬವರು ಟೆಂಪೋ ಟ್ರಾವೆಲ್ಲರ್ ನಂಬರ್ ನೋಟ್ ಮಾಡಿಕೊಂಡಿದ್ದು ಅದನ್ನು ಅಶೋಕ್ ಪೂಜಾರಿ ಬೊಳ್ಳಾಡಿಯವರು ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐಗೆ ಟ್ರಾವೆಲ್ಲರ್ ನಂಬರ್ ಸಮೇತ ಮಾಹಿತಿ ನೀಡಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಜಾಲ್ಕೂರು ಹಾಗೂ ಸಂಪಾಜೆ ಚೆಕ್‌ಪೋಸ್ಟ್ ಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಕಲ್ಲು ಗುಂಡಿಯಲ್ಲಿ ಟೆಂಪೋ ಟ್ರಾವೆಲ್ಲರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.