ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ನಿನ್ನೆಯಿಂದೀಚೆಗೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇನ್ನೂ 2-3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಹಲವೆಡೆ ನೀರು ಜಮೆಯಾಗಿ ಜನರು ಸಮಕಷ್ಟಕ್ಕೀಡಾದರು. ಮೇ 20ರಿಂದ 22ರ ತನಕ ಅತಿಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನಲೆ ಭಾರತ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ನಿನ್ನೆಯಿಂದಲೇ ಕರಾವಳಿಯಲ್ಲಿ ಮಳೆಗಾಲದ ವಾತಾವರಣ ಕಂಡುಬಂದಿತ್ತು. ಮಧ್ಯಾಹ್ನ ನಂತರ ಮಳೆ ಶುರುವಾಗಿದ್ದು, ಹಲವೆಡೆ ಬಿರುಸಗಿ ಸುರಿದಿದೆ. ನಿನ್ನೆ ರಾತ್ರಿಯಿಂದೀಚೆಗೆ ಧಾರಾಕಾರ ಮಳೆ ಸುರಿಯಲಾರಂಭಿಸಿದೆ.
ಕರಾವಳಿಯಲ್ಲಿ ಮೇ ತಿಂಗಳಲ್ಲೇ ಮಳೆಗಾಲದ ವಾತಾವರಣ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಬೇಸಿಗೆ ಬಿಸಲ ಝಳದಿಂದ ಮುಕ್ತಿ ಸಿಕ್ಕಿರುವುದು ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಸೂಚನೆಗಳನ್ನು ಬಿಡುಗಡೆ ಮಾಡಿದೆ, ಜೀವ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟಲು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕಿಳಿಯಂದಂತೆ ಎಚ್ಚರಿಕೆ ನೀಡಲಾಗಿದೆ. ಗುಡುಗು-ಮಿಂಚು ಇರುವ ಸಾಧ್ಯತೆಯಿರುವುದರಿಂದ ಕೃಷಿ ಚಟುವಟಿಕೆಗಳಿಂದ ದೂರವಿರಲು ರೈತರಿಗೆ ಸೂಚಿಸಲಾಗಿದೆ. ಗುಡುಗು ಮತ್ತು ಮಿಂಚಿನ ಸಮಯದಲ್ಲಿ ಮಕ್ಕಳು ಮತ್ತು ಹೊರಾಂಗಣ ಕೆಲಸಗಾರರು ಸೇರಿದಂತೆ ಸಾರ್ವಜನಿಕರು ಮನೆಯೊಳಗೆ ಇರಬೇಕು ಮತ್ತು ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ.
ಪ್ರವಾಸಿಗರು ಮತ್ತು ಮೀನುಗಾರರು ನದಿಗಳು, ಜಲಮೂಲಗಳು ಅಥವಾ ಸಮುದ್ರಕ್ಕೆ ಹೋಗದಂತೆ ಎಚ್ಚರಿಸಲಾಗಿದೆ. ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲುವುದನ್ನು ತಪ್ಪಿಸಲು ಮತ್ತು ಮುರಿದು ಬಿದ್ದ ಅಥವಾ ನೇತಾಡುವ ವಿದ್ಯುತ್ ಮಾರ್ಗಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಜನರಿಗೆ ಸೂಚಿಸಲಾಗಿದೆ.