ವಿದೇಶದಲ್ಲಿ ನೌಕರಿ ಕೊಡಿಸುವ ಆಮಿಷದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಪಂಗನಾಮ
ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಕೋಟಿಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವ ಕಂಪನಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ತನಿಖೆ ಮಾಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಅರೋಪ ಕೇಳಿಬಂದಿದೆ.
ವಂಚನೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ. ನಕಲಿ ಸಂಸ್ಥೆಯ ಬಗ್ಗೆ ಆಫೀಸ್ ಪ್ರೊಟೆಕ್ಟರ್ ಎಮಿಗ್ರೇಟ್ಸ್ ಮೊದಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೂ ಮಾಹಿತಿ ನೀಡಿತ್ತು. ಅದರಂತೆ, ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಕದ್ರಿ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಪೊಲೀಸ್ ಕಮೀಷನರ್ ಆದೇಶಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ತನಿಖೆಗೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಗಳು ನಕಲಿ ಸಂಸ್ಥೆಯಿಂದಲೇ ಹಣ ಪಡೆದು ದೋಖಾ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕದ್ರಿ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್, ಆ ಸಂದರ್ಭ ಪಿಎಸ್ಐ ಆಗಿದ್ದ ಉಮೇಶ್ ಅವರನ್ನು ಅಮಾನತು ಮಾಡಲಾಗಿದೆ.
ಏನಿದು ಪ್ರಕರಣ?
ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಂಗಳೂರಿನ ಖಾಸಗಿ ಏಜೆನ್ಸಿಯೊಂದು ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದು, 185ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. Hire Glow Elegent overseas international Private Ltd ಎಂಬ ಹೆಸರಿನಿಂದ ವಂಚನೆಗೊಳಗಾದ 185 ಜನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳ ಜನರೂ ವಂಚನೆಗೆ ಒಳಗಾಗಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿಯನ್ನು ಹೊಂದಿದ್ದ ಖಾಸಗಿ ಸಂಸ್ಥೆ ನ್ಯೂಜಿಲೆಂಡ್ನ VALARIS ಕಂಪನಿಯಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ದಕ್ಷಿಣಕನ್ನಡ ಜಿಲ್ಲೆಯ 185ಕ್ಕೂ ಹೆಚ್ಚು ಮಂದಿ ಕಂಪನಿಯನ್ನು ಉದ್ಯೋಗಕ್ಕಾಗಿ ಸಂಪರ್ಕಿಸಿದ್ದರು. ಪಕ್ಕದ ಉಡುಪಿ ಜಿಲ್ಲೆ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.
300ಕ್ಕೂ ಹೆಚ್ಚು ಮಂದಿಗೆ ಪಂಗನಾಮ
ಸಂಸ್ಥೆಯು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1ಲಕ್ಷದ 85 ಸಾವಿರ ರೂ., ಏಜೆಂಟ್ಗಳ ಮುಖಾಂತರ ಸುಮಾರು 60 ಮಂದಿಯಿಂದ ತಲಾ 3 ಲಕ್ಷ ರೂಪಾಯಿ ಹಾಗೂ ಬೇರೆ ಬೇರೆ ರಾಜ್ಯದ ಏಜೆನ್ಸಿಗಳ ಮೂಲಕ ತಲಾ 5ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಮಂದಿಯಿಂದ ಸುಮಾರು 8 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿರುವ ಆರೋಪ ಸಂಸ್ಥೆಯ ಮೇಲಿದೆ. ಉದ್ಯೋಗಕಾಂಕ್ಷಿಗಳು ಎಲ್ಲಾ ಹಣವನ್ನು ಆನ್ಲೈನ್ ಮುಖಾಂತರವೇ ಹೈರ್ ಗ್ಲೋ ಕಂಪೆನಿಗೆ ಪಾವತಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದ್ದ ಸಂಸ್ಥೆ ಅದೇ ತಿಂಗಳ ಕೊನೆಯಲ್ಲಿ ಫಿಟ್ನೆಸ್ ಟೆಸ್ಟ್ ಕೂಡ ಮಾಡಿಸಿತ್ತು. ಮಂಗಳೂರು ಕಚೇರಿಯ ಗ್ರೇಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ಎಂಬವರು ಈ ಎಲ್ಲ ಕಾರ್ಯನಿರ್ವಹಿಸಿದ್ದರು. ಜನವರಿ ತಿಂಗಳ ಮೊದಲ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್ಗೆ ಸಹಿ ಹಾಕಿಸಲಾಗಿತ್ತು. ಮಾರ್ಚ್ ತಿಂಗಳ ಕೊನೆಯಲ್ಲಿ ಭಾವಚಿತ್ರ, ವೀಸಾ ಅಪ್ಲಿಕೇಶನ್ ಫಾರ್ಮ್, ಬಾಕಿ ಉಳಿದ ಮೊತ್ತವನ್ನು ಕಚೇರಿಯಲ್ಲಿ ನೀಡಲು ಸಂಸ್ಥೆ ತಿಳಿಸಲಾಗಿತ್ತು. ಎಪ್ರಿಲ್ ಮೊದಲ ವಾರದಲ್ಲಿ ಟಿಕೆಟ್ ಮೊತ್ತದ ಹಣವನ್ನು ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಕೊರಿಯರ್ ಮೂಲಕ ವೀಸಾ ಬರಲಿದೆ ಎಂದು ತಿಳಿಸಿತ್ತು.
ಅಭ್ಯರ್ಥಿಗಳ ಫೋಟೊವನ್ನೇ ವಾಪಸು ಕಳುಹಿಸಿದ್ದ ವಂಚಕರು
ಏಪ್ರಿಲ್ ಕೊನೆಯ ವಾರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಕೊರಿಯರ್ ಬಂದಿತ್ತು. ಅದನ್ನು ತೆರೆದು ನೋಡಿದಾಗ, ತಾವೇ ನೀಡಿದ್ದ ಪಾಸ್‌ಪೋರ್ಟ್, ಫೋಟೋ, ಎನ್ವೆಲಪ್ ನೋಡಿ ಅವರು ಶಾಕ್ ಆಗಿದ್ದರು. ಆಗ, ತಾವು ಮೋಸ ಹೋಗಿರುವ ಬಗ್ಗೆ ಉದ್ಯೋಗಕಾಂಕ್ಷಿಗಳಿಗೆ ಮನವರಿಕೆಯಾಗಿದೆ. ಸಂಸ್ಥೆಯ ವಿರುದ್ಧ ಸಂತ್ರಸ್ತರು ಕದ್ರಿ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ಪ್ರಮುಖ ಮಸಿವುಲ್ಲಾ ಅತಿವುಲ್ಲಾ ಖಾನ್, ಗ್ರೆಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ವಿರುದ್ಧ ದೂರು ನೀಡಿದ್ದಾರೆ. ಪ್ರಮುಖ ಆರೋಪಿ ಅತಿವುಲ್ಲಾ ಖಾನ್ ಮುಂಬೈ ಮೂಲದವ ಎನ್ನಲಾಗಿದೆ.
ಸಂತ್ರಸ್ತರ ಪೈಕಿ ಕೆಲವು ಮಂದಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆಯಿಂದ ಇರುವ ಕೆಲಸವನ್ನೂ ತ್ಯಜಿಸಿದ್ದರು. ಇದೀಗ ಉದ್ಯೋಗವೂ ಇಲ್ಲದೆ ಹಣವೂ ಇಲ್ಲದೆ ದಿಕ್ಕೆಟ್ಟಿದ್ದಾರೆ. ಬಹುತೇಕ ಅಭ್ಯರ್ಥಿಗಳು. ಫೈನಾನ್ಸ್ ಸಾಲ, ಚಿನ್ನ ಅಡವಿಟ್ಟು ಹಣ ಹೊಂದಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಸಂಸ್ಥೆಗೆ ಬೀಗ ಜಡಿದ ಪೊಲೀಸರು, ಕಚೇರಿಯೊಳಗಿದ್ದ ಕಂಪ್ಯೂಟರ್ ಸೇರಿದಂತೆ ದಾಖಲೆಗಳನ್ನು ಜಪ್ತಿ ಮಾಡಿದದ್ದಾರೆ.