ರಾಹುಲ್ ಗಾಂಧಿ ಪಾಕಿಸ್ಥಾನ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕೆ
ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಸೇನೆ ಮತ್ತು ಸರಕಾರವನ್ನು ದೂಷಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ ಒಂದು ಮಾತನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರ ಮುಂತದವರು ವಾಗ್ದಾಳಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯಂತೂ ಯುದ್ಧದಲ್ಲಿ ಭಾರತ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ಲೆಕ್ಕ ಕೇಳುತ್ತಿದ್ದಾರೆ.
ವಿದೇಶಾಂಗ ಸಚಿವರನ್ನು ಪಾಕಿಸ್ಥಾನದ ಪರವಾಗಿರುವವರು ಎಂದು ಕೂಡ ಕಾಂಗ್ರೆಸ್ ಕರೆದಿದೆ. ಅವರ ಗಂಭೀರ ಮೌನ ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ ನಂತರ, ಬಿಜೆಪಿ ತಿರುಗೇಟು ನೀಡಿ ರಾಹುಲ್ ಗಾಂಧಿಯವರು ಪಾಕಿಸ್ಥಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಈ ಕುರಿತಾದ ಹೇಳಿಕೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ರಾಹುಲ್ ಗಾಂಧಿಯವರು ಸತ್ಯವನ್ನು ವಿಕೃತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಮೇ 11, 2025ರಂದು ಸೇನೆಯ ಸಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ನೀಡಿದ ಹೇಳಿಕೆಯನ್ನು ಮತ್ತೆ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ರಾಹುಲ್ ಗಾಂಧಿಯ ಆರೋಪಗಳನ್ನು ಪಾಕಿಸ್ಥಾನದ ಜಿಯೋ ನ್ಯೂಸ್ ಟಿವಿಯಲ್ಲಿ ಪ್ರಸಾರ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ ಮತ್ತು ಪಾಕಿಸ್ಥಾನ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯ ಆರೋಪ ಏನು?
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ವಿದೇಶಾಂಗ ಸಚಿವ ಜೈಶಂಕರ್ ಅವರ ವಿರುದ್ಧ ಹೊಸದಾಗಿ ಆಕ್ರಮಣ ಆರಂಭಿಸಿದ್ದಾರೆ. ಜೈಶಂಕರ್ ಮೌನವಾಗಿರುವುದನ್ನು ಟೀಕಿಸಿದ ಅವರು, ಪಿಐಬಿ ಫ್ಯಾಕ್ಟ್ ಚೆಕ್ ಪರಿಶೀಲನೆಯಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದರೂ ರಾಹುಲ್ ಗಾಂಧಿ ಆರೋಪಗಳನ್ನು ಮಾಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಜೈಶಂಕರ್ ಅವರ ಮೌನವು ಸ್ಪಷ್ಟವಾಗಿಲ್ಲ, ಅದು ಗಂಭೀರವಾಗಿದೆ. ಆದ್ದರಿಂದ ಮತ್ತೆ ಕೇಳುತ್ತೇನೆ ಭಾರತ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ? ಎಂದಿದ್ದಾರೆ. ಇದು ತಪ್ಪಲ್ಲ, ಇದು ಅಪರಾಧ. ರಾಷ್ಟ್ರವು ಸತ್ಯವನ್ನು ತಿಳಿಯಲು ಅರ್ಹವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ವಿದೇಶಾಂಗ ಸಚಿವರು ಆಪರೇಷನ್ ಸಿಂಧೂರ ಆರಂಭವಾದ ನಂತರದ ಆರಂಭಿಕ ಹಂತದಲ್ಲಿ ನಾವು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಕಾರ್ಯಾಚರಣೆ ಆರಂಭವಾಗುವ ಮೊದಲೇ ಎಂದು ಪಾಕಿಸ್ಥಾನಕ್ಕೆ ಮಾಹಿತಿ ನೀಡಲಾಗಿತ್ತು ಎಂದು ಕಾಂಗ್ರೆಸ್ ತಿರುಚಿ ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.