ವ್ಯಾಪಾರದ ನೆಪದಲ್ಲಿ ಪಾಕ್‌ಗೆ ಪ್ರಯಾಣಿಸಿ ಮಾಹಿತಿ ನೀಡುತ್ತಿದ್ದ ಪಾತಕಿ
ಲಖನೌ: ಪಾಕಿಸ್ಥಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಬಂಧನ ಬಳಿಕ ದೇಶಾದ್ಯಂತ ಬೇಹಾಗಾರಿಕೆ ನಡೆಸುತ್ತಿರುವವರ ಹುಡುಕಾಟ ನಡೆಯುತ್ತಿದ್ದು, ಇದೇ ಆರೋಪದಲ್ಲಿ ಉದ್ಯಮಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ಥಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿಯ ನಂತರ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮೊರಾದಾಬಾದ್‌ನಲ್ಲಿ ಆರೋಪಿ ಶಹಜಾದ್‌ನನ್ನು ಬಂಧಿಸಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಅವನು ತನ್ನ ನಿರ್ವಾಹಕರಿಗೆ ರವಾನಿಸುತ್ತಿದ್ದನು ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಶಹಜಾದ್ ಪಾಕಿಸ್ಥಾನಕ್ಕೆ ಹಲವು ಬಾರಿ ಪ್ರಯಾಣಿಸಿದ್ದು, ಗಡಿಯುದ್ದಕ್ಕೂ ಸೌಂದರ್ಯವರ್ಧಕಗಳು, ಬಟ್ಟೆಗಳು, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿರುವ ಐಎಸ್‌ಐ ಏಜೆಂಟ್‌ಗಳಿಗೆ ಶಹಜಾದ್ ಹಣ ಮತ್ತು ಭಾರತೀಯ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ರಾಂಪುರ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಐಎಸ್‌ಐಗಾಗಿ ಕೆಲಸ ಮಾಡಲು ಪಾಕಿಸ್ಥಾನಕ್ಕೆ ಕಳುಹಿಸುತ್ತಿದ್ದ ಎಂದು ಎಸ್‌ಟಿಎಫ್ ಹೇಳಿದೆ. ಈತ ಐಎಸ್‌ಐಗಾಗಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲು ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪಾಕಿಸ್ಥಾನದ ಗುಪ್ತಚರ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರ ಎಂಬಾಕೆಯನ್ನು ಬಂಧಿಸಿದ ಕೆಲವು ದಿನಗಳ ನಂತರ ಶಹಜಾದ್ ಬಂಧನವಾಗಿದೆ.