ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ, ಪುತ್ತೂರು ನಗರ ಸಭೆ ವತಿಯಿಂದ, ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಹಯೋಗದಲ್ಲಿ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಂಯೋಜಕತ್ವದಲ್ಲಿ ‘ಪರಿಸರ ಸ್ವಚ್ಚತೆ ಕುರಿತು ಜಾಗೃತಿ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ನಮ್ಮ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಹಾಗೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ. ತ್ಯಾಜ್ಯವನ್ನು ಕಡಿಮೆ ಮಾಡಿ ಮರುಬಳಿಕೆ ಮಾಡುವುದು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ನಮ್ಮ ಕರ್ತವ್ಯ ವಾಗಿದೆ ಎಂದರು. ವಿದ್ಯಾರ್ಥಿ ದಿಸೆಯಲ್ಲಿಯೆ ಮಕ್ಕಳು ಸ್ವಚ್ಛತೆ ಮತ್ತು ಶಿಸ್ತು ಪಾಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ವಿವಿಧ ದೃಷ್ಟಾಂತಗಳನ್ನು ಉದಾಹರಣೆಯಾಗಿ ನೀಡುವ ಮೂಲಕ ತಿಳಿಸಿದ ಅವರು, ಮುಂದೆ ನೀವು ಕಾನೂನು ಪರಿಣಿತರಾಗಿ ಯಾವುದೇ ಶ್ರೇಷ್ಠ ಹುದ್ದೆಗೆ ಹೋದರೂ, ಅಲ್ಲಿ ವೃತ್ತಿ ಧರ್ಮ ಮತ್ತು ರಾಜಧರ್ಮವನ್ನು ಪಾಲಿಸಿ ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಖ್ಯಾತ ಸಂಪನ್ಮೂಲ ವ್ಯಕ್ತಿ ಹಾಗೂ ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ, ಪರಿಸರದಲ್ಲಿ ಇರುವ ಸ್ವಚ್ಛತೆಯ ಕುರಿತಾದ ಸವಾಲುಗಳನ್ನು ವಿವಿಧ ದಾಖಲೆಗಳ ಮೂಲಕ ವಿವರಿಸಿದ ಅವರು, ಅದನ್ನು ತಡೆಗಟ್ಟುವಲ್ಲಿ ಯುವಜನತೆ ವಹಿಸಬೇಕಾದ ಪಾತ್ರದ ಕುರಿತು ತಿಳಿಸಿದರು. ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸ್ವಚ್ಛ ಭಾರತ್ ಯೋಜನೆಯಡಿ ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಯುವಜನತೆ ಮನಸ್ಸು ಮಾಡಿದರೆ ಈ ದೇಶದ ಸಮಸ್ಯೆಗಳನ್ನು ಸುಲಭವಾಗಿ ಬದಲಿಸಬಹುದು. ಈ ಹಿನ್ನಲೆಯಲ್ಲಿ ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಮನೆ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಮಾಡುವ ಮಹತ್ತರವಾದ ಜವಾಬ್ದಾರಿ ನಮ್ಮ ಯುವಜನರ ಮೇಲಿದೆ. ಸ್ವಚ್ಛ ಪರಿಸರ ದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ. ಇದನ್ನು ಸಾಧಿಸಬೇಕಾದರೆ ದೇಶದ ಅಸ್ತಿಗಳಾಗಿರುವ ಯುವಜನತೆ ವಿಶೇಷ ಗಮನ ನೀಡಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾದಾಗ ಮಾತ್ರ ಪರಿಸರ ಸ್ವಚ್ಚತೆ ಕಾಪಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯೆ ಪ್ರಮಿತಾ ಸಿ. ಹಾಸ್ ಮಾತನಾಡಿ, ಡಿಜಿಟಲ್ ಕಾಲ ಘಟ್ಟದಲ್ಲಿ ಜೀವನ ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಸುತ್ತಮುತ್ತಲಿನ ಪರಿಸರವೂ ಶುದ್ಧವಾಗಿರಬೇಕು. ವಿದ್ಯಾವಂತ ಯುವಕರು ಹಾಗೂ ಪ್ರಜ್ಞಾವಂತ ನಾಗರಿಕರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇತರರಿಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆಯಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಸ್ವಚ್ಛ ಪರಿಸರ ಇರುವ ಉತ್ತಮ ಸಮಾಜಕ್ಕಾಗಿ ಪ್ರಯತ್ನಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಹಮ್ಮದ್ ರಫೀಕ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನಾ ಘಟಕದ ಸ್ವಯಂಸೇವಕರು ರಚಿಸಿದ ಜ್ಞಾನಬಿಂಬ ಎಂಬ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆ ಯಾದ ‘ಸ್ವಚ್ಛ ಪರಿಸರ’ವನ್ನು ಅನಾವರಣಗೊಳಿಸಿ ಶುಭಹಾರೈಸಿದರು.
ಇನ್ನೊರ್ವ ಮುಖ್ಯ ಅತಿಥಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಸುಮಂಗಲಾ ಶೆಣೈ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ. ಉಪಸ್ಥಿತರಿದ್ದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕಿ ಕು. ಪ್ರಣಮ್ಯ ಪಕಲ ಸ್ವಾಗತಿಸಿ, ಎನ್. ಎಸ್. ಎಸ್. ನಾಯಕ ಪೃಥ್ವಿ ಸಾಗರ್ ವಂದಿಸಿದರು. ಎನ್. ಎಸ್. ಎಸ್. ಸ್ವಯಂಸೇವಕಿ ಅಕೃತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.