7 ಸಂಸದರ ತಂಡಗಳಿಂದ ಜಗತ್ತಿನ ಪ್ರಮುಖ ದೇಶಗಳಿಗೆ ಭೇಟಿ
ನವದೆಹಲಿ: ಪಹಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ಥಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್ ಸಿಂದೂರ ದಾಳಿ ನಡೆಸಿದ್ದ ಭಾರತ, ಈಗ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 7 ನಾಯಕರ ನೇತೃತ್ವದಲ್ಲಿ ಸಂಸದರ ನಿಯೋಗವೊಂದನ್ನು ಹಲವು ದೇಶಗಳಿಗೆ ರವಾನಿಸುವ ಮೂಲಕ ಪಾಕಿಸ್ಥಾನದ ಉಗ್ರವಾದದ ಮುಖವಾಡ ಬಯಲು ಮಾಡುವ ದಾಳ ಉರುಳಿಸಿದೆ.
ಅಚ್ಚರಿಯ ವಿಷಯವೆಂದರೆ ಈ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂಸದ ನಾಸಿರ್ ಹುಸೇನ್ ಹೆಸರನ್ನು ಕಾಂಗ್ರೆಸ್ ಕಳುಹಿಸಿದ್ದರೂ ಸರ್ಕಾರ ಅವರನ್ನು ಪರಿಗಣಿಸಿಲ್ಲ. ಆದರೆ ಕಾಂಗ್ರೆಸ್ ಹೆಸರು ಕಳುಹಿಸದೆ ಇದ್ದರೂ ಶಶಿ ತರೂರ್ ಅವರಿಗೆ ತಂಡದ ನೇತೃತ್ವ ನೀಡುವ ಮೂಲಕ ಅವರ ವಿದೇಶಾಂಗ ವಿಷಯಗಳ ನಿರ್ವಹಣೆಯ ಜ್ಞಾನಕ್ಕೆ ಮನ್ನಣೆ ನೀಡಿದೆ.
ಶುಕ್ರವಾರ ಕೇಂದ್ರ ಸರ್ಕಾರ ನಿಯೋಗವನ್ನು ಕಳಿಸುವ ವಿಷಯ ಪ್ರಸ್ತಾಪ ಮಾಡಿತ್ತು. ಇದೀಗ ಈ ನಿಯೋಗಗಳ ನೇತೃತ್ವ ಯಾರು ವಹಿಸಲಿದ್ದಾರೆಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರನ್ವಯ ಬಿಜೆಪಿಯ ರವಿಶಂಕರ್ ಪ್ರಸಾದ್, ಬಿಜೆಡಿಯ ಬೈಜಯಂತ್ ಪಾಂಡಾ, ಜೆಡಿಯುನ ಸಂಜಯ್ ಕುಮಾರ್, ಕಾಂಗ್ರೆಸ್‌ನ ಶಶಿ ತರೂರ್, ಡಿಎಂಕೆಯ ಕನಿಮೋಳಿ, ಎನ್‌ಸಿಪಿ (ಶರದ್ ಬಣ) ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಶಿಂಧೆ ಅವರು ನಿಯೋಗಗಳ ನಾಯಕತ್ವ ವಹಿಸಲಿದ್ದಾರೆ.
ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಸಮಿತಿಯಲ್ಲಿ ಯಾರ್ಯಾರು, ಎಲ್ಲೆಲ್ಲಿಗೆ?
ಈ ನಿಯೋಗಗಳಲ್ಲಿ ಸಂಸದರಾದ ಅನುರಾಗ್ ಠಾಕೂರ್, ಅಪರಾಜಿತಾ ಸಾರಂಗಿ, ಮನೀಶ್ ತಿವಾರಿ, ಅಸಾದುದ್ದೀನ್ ಒವೈಸಿ, ಅಮರ್ ಸಿಂಗ್, ರಾಜೀವ್ ಪ್ರತಾಪ್ ರೂಡಿ, ಸಮಿಕ್ ಭಟ್ಟಾಚಾರ್ಯ, ಬ್ರಿಜ್ ಲಾಲ್, ಸರ್ಫರಾಜ್ ಅಹ್ಮದ್, ಪ್ರಿಯಾಂಕಾ ಚತುರ್ವೇದಿ, ವಿಕ್ರಮಜಿತ್ ಸಾಹಿ, ಸಸ್ಮಿತ್ ಪಾತ್ರ ಮತ್ತು ಭುವನೇಶ್ವರ ಕಲಿತಾ ಇರಲಿದ್ದಾರೆ. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹಾಲಿ ಸಂಸದರಲ್ಲದೆ ಇದ್ದರೂ ರಾಜತಾಂತ್ರಿಕ ಪರಿಣತಿ ಗಮನಿಸಿ ಅವರನ್ನೂ ನಿಯೋಗಕ್ಕೆ ಸೇರಿಸಿಕೊಳ್ಳಲಾಗಿದೆ.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದಲ್ಲಿ ಗುಂಪು ಸೌದಿ ಅರೇಬಿಯಾ, ಕುವೈತ್, ಬಹ್ರೈನ್ ಮತ್ತು ಅಲ್ಜೀರಿಯಾಕ್ಕೆ ಪ್ರಯಾಣಿಸಲಿದೆ. ಬಿಜೆಪಿಯ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ 2ನೇ ನಿಯೋಗ ಬ್ರಿಟನ್, ಫ್ರಾನ್ಸ್, ಜರ್ಮನಿ, ಯುರೋಪ್, ಇಟಲಿ ಮತ್ತು ಡೆನ್ಮಾರ್ಕ್‌ಗೆ ಭೇಟಿ ನೀಡಲಿದೆ. ಜೆಡಿ(ಯು)ನ ಸಂಜಯ್ ಕುಮಾರ್ ಝಾ ನೇತೃತ್ವದ ತಂಡ ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಲಿದೆ.
ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ನೇತೃತ್ವದ 4ನೇ ಗುಂಪು, ಯುಎಇ, ಲೈಬೀರಿಯಾ, ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೋ ಮತ್ತು ಸಿಯೆರಾ ಲಿಯೋನ್ ಪ್ರವಾಸ ಮಾಡಲಿದೆ. ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ನೇತೃತ್ವದ 5ನೇ ತಂಡ ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಡಿಎಂಕೆಯ ಕನಿಮೋಳಿ ಕರುಣಾನಿಧಿ ನೇತೃತ್ವದ ತಂಡ ಗ್ರೀಸ್, ಸ್ಲೊವೇನಿಯಾ, ಲಾಟ್ವಿಯಾ ಮತ್ತು ರಷ್ಯಾಕ್ಕೆ ಪ್ರಯಾಣಿಸಲಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ತಂಡ ಈಜಿಪ್ಟ್, ಕತಾರ್, ಇಥಿಯೋಪಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದೆ.