ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವ ಸಂದೇಶ ಪ್ರಕಟ
ಬೆಂಗಳೂರು: ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಹೇಳಿಕೆ ಪ್ರಕಟಿಸಿದ ಬೆಂಗಳೂರಿನ ಕೋರಮಂಗಲದ ಜಿ.ಎಸ್.ಸೂಟ್ ಹೋಟೆಲ್‌ನ ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದ್ದು, ಜಿ.ಎಸ್.ಸೂಟ್ ಹೋಟೆಲ್ ಸೀಜ್ ಮಾಡಲಾಗಿದೆ. ಹೋಟೆಲ್ ಮಾಲೀಕ ಜಮ್ಸದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಗರದ ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿರುವ ಈ ಹೋಟೆಲ್‌ನಲ್ಲಿ ನಿನ್ನೆ ಕನ್ನಡಿಗರಿಗೆ ಅಪಮಾನ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಮ್ಮ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ. ಪದೇಪದೇ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಕೆರಳಿದ್ದವು. ಈ ಹೋಟೆಲ್‌ನ ಹೊರಭಾಗದ ಡಿಸ್‌ಪ್ಲೇ ಬೋರ್ಡ್‌ನಲ್ಲಿ ನಿನ್ನೆ ರಾತ್ರಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಬಳಿಕ ವಿಡಿಯೋ ನೋಡಿ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ.
ತಕ್ಷಣ ಅಲರ್ಟ್ ಆದ ಮಡಿವಾಳ ಪೊಲೀಸರು ಹೋಟೆಲ್ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಅಬ್ದುಲ್ ಸಮಾದ್ ಹಾಗೂ ಮ್ಯಾನೇಜರ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಜೊತೆಗೆ ಡಿಸ್‌ಪ್ಲೇ ಬೋರ್ಡ್ ವಶಕ್ಕೆ ಪಡೆದು, ಹೋಟೆಲ್ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಡಿಸ್‌ಪ್ಲೇ ಬೋರ್ಡ್‌ನ ಕಂಟ್ರೋಲರನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ಆದರೆ ಪೊಲೀಸರ ತನಿಖೆ ನಂತರವೇ ಅಸಲಿ ಸತ್ಯ ಹೊರಬರಬೇಕಿದೆ.