ಗಂಭೀರ ಗಾಯಗೊಂಡ ಪೈಂಟರ್ ಆಸ್ಪತ್ರೆಗೆ ದಾಖಲು
ಬಂಟ್ವಾಳ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕೃತ್ಯದಿಂದ ಉದ್ವಿಗ್ನಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಇನ್ನೊಂದು ಹತ್ಯಾ ಯತ್ನ ನಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಪೇಟೆಯ ಅಕ್ಕರಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರುಗಳಿಂದ ದಾಳಿ ಮಾಡಲಾಗಿದೆ. ಅಕ್ಕರಂಗಡಿ ನಿವಾಸಿ ಹಮೀದ್ (38) ಎಂಬವರಿಗೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಅಕ್ಕರಂಗಡಿಯ ಪೈಂಟಿಂಗ್ ಕೆಲಸ ಮಾಡುತ್ತಿರುವ ಹಮೀದ್ ಯಾನೆ ಅಮ್ಮಿ ಅವರಿಗೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ಹಮೀದ್ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿನ್ನೆ ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ಸಚಿವರು ಮಂಗಳೂರಿನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭಾರಿ ಭದ್ರತೆಯೂ ಇತ್ತು. ಇದರ ನಡುವೆಯೇ ಬಂಟ್ವಾಳದಲ್ಲಿ ಇರಿತದ ಘಟನೆ ಸಂಭವಿಸಿದೆ. ಆದರೆ ಇದು ಕೋಮು ಗಲಭೆಗೆ ಸಂಬಂಧಿಸಿದ ಪ್ರಕರಣ ಅಲ್ಲ ಎನ್ನಲಾಗಿದೆ. ಒಂದೇ ಕೋಮಿಗೆ ಸಂಬಂಧಿಸಿದ ಗಲಾಟೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಮೀದ್ ರಸ್ತೆ ಬದಿ ನಿಂತಿದ್ದ ವೇಳೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಹಮೀದ್ ಅವರ ಕೈಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಪಾಣೆಮಂಗಳೂರು ನೆಹರು ನಗರದಲ್ಲಿ ಒಂದೇ ಕೋಮಿನವರ ನಡುವೆ ಗಲಾಟೆಯಾಗುತ್ತಿದ್ದು, ಅದರ ಮುಂದುವರಿದ ಭಾಗ ಹಮೀದ್ ಮೇಲೆ ತಲವಾರು ದಾಳಿ ಎನ್ನಲಾಗುತ್ತಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಪೊಲೀಸರ ತನಿಖೆಯಿಂದ ಹಲ್ಲೆಗೆ ಕಾರಣ ತಿಳಿದುಬರಲಿದೆ.