ಸಿದ್ದರಾಮಯ್ಯ ಮಾದರಿಯಲ್ಲಿ ಪಾಕಿಸ್ಥಾನದ ಮಾಧ್ಯಮಗಳಲ್ಲಿ ಸ್ಟಾರ್ ಆಗಲು ಉತ್ಸುಕ ಎಂದು ಟೀಕೆ
ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಬೂಟಾಟಿಕೆ ಎಂದ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಶಾಸಕನ ವಿರುದ್ಧ ದೂರು ಸಲ್ಲಿಸಿದ್ದಾರೆ.
ಕೋಲಾರ ಎಸ್ಪಿ ಬಿ ನಿಖಿಲ್ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೂಡಲೇ ಶಾಸಕ ಕೊತ್ತೂರು ಮಂಜುನಾಥ್ ಬಂಧನಕ್ಕೆ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಒತ್ತಾಯಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕನ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಶುಕ್ರವಾರ ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಂಜುನಾಥ್, ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಸಾಯಿಸಿದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲ ಅಂದರೆ ಹೃದಯಾಘಾತದಿಂದ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು. ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ. ಪಾಕಿಸ್ಥಾನದ ಮೇಲೆ ವಾಯುದಾಳಿ ನಡೆಸಿದ್ದು ಅದರಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಎಲ್ಲೂ ದೃಢಪಟ್ಟಿಲ್ಲ ಎಂದು ಆಪರೇಷನ್ ಸಿಂದೂರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಕೊತ್ತೂರು ಮಂಜುನಾಥ್ ಹೇಳಿಕೆ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್ ವಜಾಗೊಳಿಸಲು ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧದ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿ ಪಾಕಿಸ್ಥಾನದ ಮಾಧ್ಯಮಗಳಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ನಂತರ, ಮತ್ತೊಬ್ಬ ಕಾಂಗ್ರೆಸ್ ನಾಯಕ ಪಾಕಿಸ್ಥಾನ ಮಾಧ್ಯಮದಲ್ಲಿ ಸ್ಟಾರ್ ಆಗಲು ಉತ್ಸುಕರಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಜೆಡಿಎಸ್ ಪೋಸ್ಟ್ ಮಾಡಿ, ಪಾಕಿಸ್ಥಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದದರೆ ಪ್ರತಿ ಬಾರಿಯೂ ಕಾಂಗ್ರೆಸ್ಸಿಗರು ಸಾಕ್ಷಿ ಕೇಳಿ, ಸೇನೆಗೆ ಅವಮಾನ ಮಾಡುತ್ತಲೇ ಇದ್ದಾರೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರ ಶೌರ್ಯ, ಪರಾಕ್ರಮವನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ. ಕಾಂಗ್ರೆಸ್ಸಿಗರು ಮಾತ್ರ ಸಾಕ್ಷಿ ಕೇಳುತ್ತಾ, ನೀಚ ಬುದ್ಧಿ, ಕೀಳು ಅಭಿರುಚಿಯನ್ನು ಪ್ರದರ್ಶಿಸುತ್ತಿರುವುದು ದುರಂತ ಎಂದು ಕಿಡಿಕಾರಿದೆ.
ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಪಹಲ್ಗಾಮ್’ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಪೈಶಾಚಿಕ ಭಯೋತ್ಪಾದಕ ದಾಳಿ ಮತ್ತು ಉಗ್ರರಿಗೆ ಪಾಕಿಸ್ಥಾನದ ಚಿತಾವಣಿಯಷ್ಟೇ ಅಲ್ಲದೇ ತನ್ನ ತನು-ಮನ-ಧನ ಅರ್ಪಣೆ ಮಾಡುತ್ತಿರುವುದನ್ನು ಖಂಡಿಸುವ ಬದಲಿಗೆ ಕಾಂಗ್ರೆಸ್ ಪಕ್ಷ ಸೇನಾಪಡೆಗಳನ್ನು, ಪ್ರಧಾನಿ ಮೋದಿ ಅವರನ್ನೂ ನಿಂದಿಸುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.