ಪುತ್ತೂರು: ಮಾಡೂರು ಗ್ರಾಮದ ಕೌಡಿಚಾರ್ನಲ್ಲಿ 2009 ರಲ್ಲಿ ಮನೆ ಕಳ್ಳತನ ಮಾಡಿದ ಆರೋಪಿ ಸುಮಾರು 16 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಘೋಷಿತ ಅಪರಾಧಿ (Proclaimed Offender) ಮಾಡಾ ಸ್ವಾಮಿ ಎಂಬವನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿನ್ನು ತಮಿಳುನಾಡು ರಾಜ್ಯದ ತಿರುನಲ್ವೆ ಜಿಲ್ಲೆಯ ತಂಗಮಾಳಾಪುರಂ ನಿವಾಸಿಯಾದ ಮಾಡಾಸ್ವಾಮಿ(17ವ) ಬಂಧಿತ ಆರೋಪಿ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ:
ದಿ. ಜು 5 2009 ರಂದು ರಾತ್ರಿ ಕೌಡಿಚಾರ್ ನಿವಾಸಿ ಗಣಪಯ್ಯ ಎಂಬವರ ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿದ್ದ ಕಳ್ಳರು. ಸುಮಾರು 1,30,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಪೊಲೀಸರು ಮೇ15 ರಂದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಛಡಾಯಮಂಗಲಂ ಪೊಲೀಸ್ ಠಾಣಾ ಸರಹದ್ದಿನ ನೀಲಂಮೇಲ್ ಎಂಬಲ್ಲಿ ಕೇರಳ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದಿದ್ದರು. ಮೇ 16ರಂದು ಆರೋಪಿಯನ್ನು ಪುತ್ತೂರಿನ ಪ್ರಿನ್ಸಿಪಾಲ್ ಸೀನಿಯರ್ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇತರೆ ಪ್ರಕರಣಗಳ ಸುಳಿವು :
ಪ್ರಾಥಮಿಕ ತನಿಖೆಯ ಪ್ರಕಾರ. ಬಂಧಿತ ಆರೋಪಿ ಮಾಡಾಸ್ವಾಮಿ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆ, ಹಾಗೂ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.