ಟರ್ಕಿಯಲ್ಲಿ ಕಚೇರಿ ತೆರೆಯಲು ಹಣ ಕೊಟ್ಟದ್ದು ಯಾರು ಎಂಬ ಪ್ರಶ್ನೆ
ನವದೆಹಲಿ : ಯುದ್ಧದಲ್ಲಿ ಪಾಕಿಸ್ಥಾನವನ್ನು ಬಹಿರಂಗವಾಗಿ ಬೆಂಬಲಿಸಿರುವ ಟರ್ಕಿ ದೇಶದ ಜೊತೆಗೆ ಕಾಂಗ್ರೆಸ್ ಹೊಂದಿರುವ ಸಂಬಂಧ ಈಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸಲು ತನ್ನ ಬಳಿ ಹಣವೇ ಇಲ್ಲ ಎಂದು ಹೇಳಿದ್ದ ಕಾಂಗ್ರೆಸ್‌ಗೆ 2019ರಲ್ಲೇ ಟರ್ಕಿಯಲ್ಲಿ ಸಾಗರೋತ್ತರ ಕಚೇರಿ ತೆರೆಯಲು ಹಣ ಎಲ್ಲಿಂದ ಬಂದಿತ್ತು ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಟರ್ಕಿ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧಗಳ ಬಗ್ಗೆ ಟೀಕೆಗಳು ಶುರುವಾಗಿವೆ. 2019ರಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಟರ್ಕಿ ಪಾಕಿಸ್ಥಾನಕ್ಕೆ ಬೆಂಬಲ ನೀಡಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಟರ್ಕಿಯಲ್ಲಿ ತನ್ನ ಸಾಗರೋತ್ತರ ಕಚೇರಿಯನ್ನು ತೆರೆದಿತ್ತು. ಮೊಹಮ್ಮದ್ ಯೂಸುಫ್ ಖಾನ್ ಎಂಬವರು ಟರ್ಕಿಯಲ್ಲಿ ಈ ಕಚೇರಿಯ ನೇತೃತ್ವ ವಹಿಸಿದ್ದಾರೆ. ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಬೆಂಬಲಿಗರ ಗುಂಪಾಗಿದ್ದು, ಅವರು ಕಾಂಗ್ರೆಸ್ಸನ್ನು ವಿದೇಶಗಳಲ್ಲಿ ಪ್ರಚಾರ ಮಾಡುತ್ತಾರೆ. ರಾಹುಲ್ ಗಾಂಧಿಯವರ ಆಪ್ತ ಮಿತ್ರ ಸ್ಯಾಮ್ ಪಿತ್ರೋಡಾ ಐಒಸಿಯ ಅಧ್ಯಕ್ಷರಾಗಿದ್ದಾರೆ.
ಟರ್ಕಿಯಲ್ಲಿ ಕಚೇರಿ ಆರಂಭ ಹಾಗೂ ಟರ್ಕಿಯರನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿಲುವು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಟರ್ಕಿ ಮತ್ತು ಭಾರತದ ಸಂಬಂಧ ಹಳಸಿರುವಾಗ ಮತ್ತೆ ಕಾಂಗ್ರೆಸ್‌ನ ಟರ್ಕಿ ಪ್ರೇಮ ವಿವಾದಕ್ಕೀಡಾಗಿದೆ. ಟರ್ಕಿ ಕಾಂಗ್ರೆಸ್‌ಗೆ ಸಹಾಯ ಮಾಡಿತ್ತೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರನ್ನು ಟರ್ಕಿಯ ಬಹಿಷ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದಾಗ ಅವರಿಗೆ ತಕ್ಷಣಕ್ಕೆ ಯಾವುದೇ ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ.
ಯಾವ ದೇಶದೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಅಥವಾ ಬೇಡ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕೇ ಹೊರತು ವಿರೋಧ ಪಕ್ಷವಲ್ಲ ಎಂದು ಸಬೂಬು ಹೇಳಿದ್ದಾರೆ.