ಪಾಕಿಸ್ಥಾನದಲ್ಲಿ ವಿಕಿರಣ ಸೋರಿಕೆಯಾಗಿಲ್ಲ : ವಿಶ್ವಸಂಸ್ಥೆ ಸ್ಪಷ್ಟನೆ

ಅಣ್ವಸ್ತ್ರಗಳ ಮೇಲೆ ದಾಳಿಯಾಗಿರುವುದನ್ನು ಅಲ್ಲಗಳೆದ ಪರಮಾಣು ಕಾವಲು ಸಂಸ್ಥೆ

ಇಸ್ಲಾಮಾಬಾದ್ : ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ಥಾನದಲ್ಲಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆ ಬಳಿಕ ಕಿರಾನ ಬೆಟ್ಟಗಳಲ್ಲಿ ವಿಕಿರಣ ಸೋರಿಕೆಯಾಗುತ್ತಿದೆ ಎನ್ನುವ ವದಂತಿ ಸುಳ್ಳು ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಸ್ಪಷ್ಟಪಡಿಸಿದೆ.

ಪಾಕಿಸ್ಥಾನದ ಯಾವುದೇ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆ ಅಥವಾ ಹೊರಸೂಸುವಿಕೆಯ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಪತ್ರಿಕಾ ವಿಭಾಗದ ಫ್ರೆಡೆರಿಕ್ ಡಹ್ಲ್ ಹೇಳಿದ್ದಾರೆ. ಈ ಮೊದಲು ಕೆಲವು ಸಾಮಾಜಿಕ ಮಾಧ್ಯಮಗಳು ಹಾಗೂ ವಿದೇಶಿ ಮಾಧ್ಯಮ ಸಂಸ್ಥೆಗಳು ಪಾಕಿಸ್ಥಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎನ್ನಲಾದ ಕಿರಾನ ಬೆಟ್ಟಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿತ್ತು ಎನ್ನುವ ಸುದ್ದಿಯನ್ನು ಬಿತ್ತರಿಸಿದ್ದವು.





















































 
 

ಆದರೆ ಭಾರತೀಯ ಸೇನೆಯೂ ಈ ಹೇಳಿಕೆ ತಿರಸ್ಕರಿಸಿತ್ತು. ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ. ಭಾರ್ತಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಕಿರಾನ ಬೆಟ್ಟಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು. ನಮಗೆ ಇದರ ಬಗ್ಗೆ ತಿಳಿದಿರಲಿಲ್ಲ. ನಾವು ಕಿರಾನ ಬೆಟ್ಟಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಭಾರತ ಸರ್ಗೋಧಾ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಪಾಕಿಸ್ಥಾನದ ಹಲವಾರು ಮಿಲಿಟರಿ ಸ್ಥಾಪನೆಗಳ ಮೇಲೆ ನಿಖರವಾದ ವಾಯುದಾಳಿಗಳನ್ನು ನಡೆಸಿದೆ. ದಾಳಿಯ ನಂತರ ಸರ್ಗೋಧಾದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕಿರಾನ ಬೆಟ್ಟಗಳ ಮೇಲೆ ದಾಳಿ ನಡೆದಿದೆ ಮತ್ತು ವಿಕಿರಣ ಸೋರಿಕೆ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. US B350 AMS ವಿಮಾನವು ಪಾಕಿಸ್ಥಾನದ ವಾಯುಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ಈಜಿಪ್ಟ್‌ನಿಂದ ಬೋರಾನ್ (ವಿಕಿರಣವನ್ನು ನಿಯಂತ್ರಿಸುವ ಅಂಶ) ಹೊತ್ತೊಯ್ಯುವ ವಿಮಾನವು ಪಾಕಿಸ್ಥಾನವನ್ನು ತಲುಪುವ ಬಗ್ಗೆಯೂ ವದಂತಿಗಳು ಹರಿದಾಡಿದ್ದವು.

ಆದರೆ ವಿಶ್ವಸಂಸ್ಥೆಯ ಐಎಇಎ ಈ ಎಲ್ಲ ಅಂತೆಕಂತೆಗಳನ್ನು ನಿರಾಕರಿಸಿದೆ. ಭಾರತೀಯ ಅಧಿಕಾರಿಗಳು ಮತ್ತು ಪಾಕಿಸ್ಥಾನ ಸರ್ಕಾರ ಕೂಡ ತಿರಸ್ಕರಿಸಿದೆ. ಪಾಕಿಸ್ಥಾನ ಸರ್ಕಾರದಿಂದ ಬಂದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎಂದು ಹೇಳಲಾದ ವೈರಲ್ ದಾಖಲೆಯೂ ನಕಲಿ ಎಂದು ಕಂಡುಬಂದಿದೆ.

ಭಾರತ-ಪಾಕಿಸ್ತಾನ ಒಪ್ಪಂದ 1988ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದ ಒಪ್ಪಂದಕ್ಕೆ ಸಹಿ ಹಾಕಲಾಗಿತು. ಇದರ ಅಡಿಯಲ್ಲಿ, ಎರಡೂ ದೇಶಗಳು ಪರಸ್ಪರರ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡದಿರಲು ಬದ್ಧವಾಗಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top