ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗುತ್ತಿರುವ ಅನುಮಾನ

ಕಿರಾನ ಬೆಟ್ಟದಡಿಯಲ್ಲಿರುವ ಅಣ್ವಸ್ತ್ರ ಸಂಗ್ರಹಕ್ಕೆ ಭಾರತದ ಕ್ಷಿಪಣಿಗಳು ಅಪ್ಪಳಿಸಿರುವ ಕುರಿತು ಚರ್ಚೆ

ನವದೆಹಲಿ: ಭಾರತದ ಕ್ಷಿಪಣಿಗಳು ಪಾಕಿಸ್ಥಾನದ ಅಣ್ವಸ್ತ್ರಗಳ ಮೇಲೆಯೇ ದಾಳಿ ನಡೆಸಿವೆ ಎಂಬ ದಟ್ಟ ವದಂತಿಯೊಂದು ಹರಿದಾಡುತ್ತಿದೆ. ಭಾರತದ ಸೇನೆ ಪಾಕ್‌ನ ಅಣ್ವಸ್ತ್ರಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಾಕಿಸ್ಥಾನದಲ್ಲಿ ಪರಮಾಣು ವಿಕಿರಣ ಸೋರಿಕೆ ಆಗುತ್ತಿದ್ಯಾ ಎಂಬ ಅನುಮಾನ ಹುಟ್ಟಿಸಿದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ ಕಿರಾನ ಬೆಟ್ಟದ ಮೇಲಿನ ದಾಳಿ ಎಂಬ ವಿಚಾರ ಕಳೆದ ಶನಿವಾರದಿಂದ ಜೋರಾಗಿ ಚರ್ಚೆ ಆಗುತ್ತಿದೆ.

















































 
 

ಪಾಕ್‌ನ ಪಂಜಾಬ್ ಪ್ರಾಂತ್ಯದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಈ ವಾಯುನೆಲೆ ಕಿರಾನಾ ಬೆಟ್ಟದೊಂದಿಗೆ ಸಂಪರ್ಕ ಹೊಂದಿದೆ. ಕಿರಾನಾ ಬೆಟ್ಟದ ಕೆಳಗಡೆ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹವಿದ್ದು, ಇಲ್ಲಿಂದ ವಿಕಿರಣ ಸೋರಿಕೆಯಾಗುತ್ತಿದೆ ಎಂಬ ವದಂತಿ ಎದ್ದಿದೆ.

ಈ ಬೆಟ್ಟದ ಸಮೀಪದಲ್ಲಿರುವ ಸ್ಥಳೀಯರಿಗೆ ಆರೋಗ್ಯ ಸಮಸ್ಯೆ ಆಗುತ್ತಿದ್ದು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಸರಿಯಾಗಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಪರಮಾಣು ನಿಯಂತ್ರಣ ಪ್ರಾಧಿಕಾರದ ವೆಬ್‌ಸೈಟ್‌ ನಿಗೂಢವಾಗಿ ಆಫ್‌ಲೈನ್‌ ಆಗಿದೆ.

ಅಮೆರಿಕ ಮತ್ತು ಈಜಿಪ್ಟ್‌ನಿಂದ 2 ವಿಶೇಷ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿದ್ದು, ಈ ವಿಶೇಷ ವಿಮಾನಗಳು ವಿಕಿರಣ ಸೋರಿಕೆ ಪತ್ತೆ ಮಾಡುವ ವಿಮಾನಗಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಜೊತೆಗೆ ಈಜಿಪ್ಟ್‌ನಿಂದ ಅಪಾರ ಪ್ರಮಾಣದ ಬೋರಾನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ವಿಕಿರಣ ಸೋರಿಕೆಯನ್ನು ತಟಸ್ಥಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ವಿಕಿರಣ ಸೋರಿಕೆ ಆಗುತ್ತಿರುವ ಬಗ್ಗೆ ಇಲ್ಲಿಯವರೆಗೆ ಪಾಕ್‌ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಣ್ವಸ್ತ್ರಗಳ ಮೇಲೆ ದಾಳಿಯಾಗಿರುವ ಅನುಮಾನಕ್ಕೆ ಕಾರಣವಾಗಿದೆ.

ಸೋಮವಾರ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಕಿರಾನ ಬೆಟ್ಟದ ಮೇಲೆ ದಾಳಿ ನಡೆದಿದ್ಯಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ ಭಾರ್ತಿ, ಕಿರಾನಾ ಬೆಟ್ಟದಲ್ಲಿ ಪರಮಾಣು ಸ್ಥಾವರವಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಉತ್ತರಿಸಿದ್ದರು. ಕಿರಾನ ಬೆಟ್ಟದ ಮೇಲೆ ನಾವು ಯಾವುದೇ ದಾಳಿ ಮಾಡಿಲ್ಲ. ಅಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ ಎಂದಿದ್ದರು.

ಸರ್ಗೋಧಾ ವಾಯುನೆಲೆಯಿಂದ ರಸ್ತೆಯ ಮೂಲಕ ಕೇವಲ 20 ಕಿಮೀ ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿಮೀ ದೂರದಲ್ಲಿ ಕಿರಾನಾ ಬೆಟ್ಟ ಇದೆ. ಸುಮಾರು 68 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ ಮತ್ತು 39 ಕಿ.ಮೀ ಪರಿಧಿಯಿಂದ ಸುತ್ತುವರಿದಿರುವ ಕಿರಾನ ಬೆಟ್ಟಗಳು ಭಾರಿ ರಕ್ಷಣಾ ವ್ಯವಸ್ಥೆಯಿದೆ. ಇದರ ಒಳಗಡೆ ಕನಿಷ್ಠ 10 ಭೂಗತ ಸುರಂಗ ಇದೆ ಎನ್ನಲಾಗುತ್ತಿದೆ

ಭಾರತ ಮೇ 9 ಮತ್ತು 10ರ ರಾತ್ರಿ ಪಾಕಿಸ್ಥಾನದ ಮೇಲೆ ಪ್ರಬಲವಾಗಿ ದಾಳಿ ನಡೆಸಿತ್ತು. ಅದರಲ್ಲೂ ವಾಯುಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಸೇನಾ ನೆಲೆಗಳ ಜೊತೆಯಲ್ಲಿ ಶಸ್ತ್ರಾಸ್ತ್ರ ಇರುವ ಜಾಗದ ಮೇಲೂ ಕ್ಷಿಪಣಿ ಹಾಕಿದೆ. ಈ ಪೈಕಿ ಪಾಕಿಸ್ಥಾನ ಅಣ್ವಸ್ತ್ರ ಸಂಗ್ರಹ ಮತ್ತು ಮಿಲಿಟರಿ ಸಂಗ್ರಹಣಾ ಸ್ಥಳ ಕಿರಾನಾ ಬೆಟ್ಟದ ಮೇಲೆಯೇ ದಾಳಿ ನಡೆಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಈ ವಿಚಾರಕ್ಕೆ ಪೂರಕ ಎಂಬಂತೆ ಕಿರಾನ ಬೆಟ್ಟದಿಂದ ಸ್ಫೋಟ ಸಂಭವಿಸಿ ಎತ್ತರಕ್ಕೆ ಹೊಗೆ ಹೊತ್ತಿರುವ ದೃಶ್ಯ ಸೆರೆಯಾಗಿತ್ತು. ವೀಡಿಯೊ ಮಾಡಿದ್ದ ವ್ಯಕ್ತಿಯೊಬ್ಬರು ಕಿರಾನಾ ಬೆಟ್ಟದ ಮೇಲೆ ದಾಳಿ ನಡೆದಿದೆ ಎಂದು ಹೇಳುತ್ತಿರುವ ಧ್ವನಿಯೂ ರೆಕಾರ್ಡ್‌ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top