ಪುತ್ತೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗ ತೆರಳಿ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ದೂರು ನೀಡಿದ್ದಾರೆ.
ಅಮಳ ರಾಮಚಂದ್ರ ಅವರು ಮೇ.12ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಬರಹವನ್ನು ಬರೆದಿರುತ್ತಾರೆ. ಜೊತೆಗೆ ಪ್ರಧಾನಿಯವರನ್ನು ಅಣಕಿಸುವ ಅನೇಕ ಪೋಸ್ಟರ್ಗಳನ್ನು ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವುದು ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿಯವರಿಗೆ ಮಾಡಿದ ಅವಮಾನವಾಗಿದೆ. ದೇಶದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳು ಭಾವನೆಯನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ದೇಶದ ಭದ್ರತೆಯ ಬಗ್ಗೆ ಕೀಳು ಭಾವನೆಯನ್ನು ಬಿಂಬಿಸುವುದು ದೇಶ ದೋಹದ ಕೆಲಸವಾಗಿದೆ. ಇದು ಬಿಜೆಪಿ ಕಾರ್ಯಕರ್ತರಾದ ನಮಗೆ ಬೇಸರ ಆಗಿದೆ. ಅಲ್ಲದೆ ದೇಶದ ಪ್ರಧಾನಿಯವರಿಗೆ ಅವಮಾನ ಮಾಡಿದ್ದಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿಯವರನ್ನು ಅವಮಾನ ಮಾಡಿದ ಅಮಳ ರಾಮಚಂದ್ರ ಅವರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಸಹಿತ ಬಿಜೆಪಿ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.