ಸಮುದ್ರದಲ್ಲಿ ಕಟ್ಟೆಚ್ಚರದಿಂದ ಗುಂಪಾಗಿ ಮೀನುಗಾರಿಕೆ ನಡೆಸಲು ಸಲಹೆ
ಉಡುಪಿ: ಯುದ್ಧದ ಕಾರ್ಮೋಡ ಸದ್ಯಕ್ಕೆ ಸರಿದಿದ್ದರೂ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಕಟ್ಟೆಚ್ಚರದಿಂದಿರಲು ಮೀನುಗಾರರಿಗೆ ಸರಕಾರ ಸೂಚನೆ ನೀಡಿದೆ. ಎರಡು-ಮೂರು ದೋಣಿಗಳು ಗುಂಪಾಗಿ ಮೀನುಗಾರಿಕೆ ನಡೆಸಲು ಸೂಚಿಸಲಾಗಿದೆ ಮತ್ತು ಪ್ರತಿಕ್ಷಣವೂ ಕಟ್ಟೆಚ್ಚರದಿಂದ ಇರಬೇಕೆಂದು ಸೂಚಿಸಲಾಗಿದೆ.
ಯಾವುದೇ ಅನುಮಾನಾಸ್ಪದ ದೋಣಿ ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲು ಮೀನುಗಾರಿಕಾ ಮೀನುಗಾರಿಕೆ ಇಲಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ಸೂಚಿಸಿದ್ದಾರೆ. ಯಾವುದೇ ಸಂದೇಹ ಅಥವಾ ಅನುಮಾನಾಸ್ಪದ ದೃಶ್ಯ ಕಂಡುಬಂದರೆ ತಕ್ಷಣವೇ ಭಾರತೀಯ ನೌಕಾಪಡೆ, ಕರಾವಳಿ ಭದ್ರತಾ ಪೊಲೀಸರು ಅಥವಾ ಇತರ ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ ತಿಳಿಸಲು ಸೂಚಿಸಲಾಗಿದೆ.
ಸಮುದ್ರ ತೀರದಲ್ಲಿ ಅಥವಾ ಸಮುದ್ರದ ದ್ವೀಪಗಳಲ್ಲಿ ಜನರು ಕಂಡುಬಂದರೆ ಮೀನುಗಾರರು ವರದಿ ಮಾಡಬೇಕು. ಅಂತಹ ಮಾಹಿತಿಯನ್ನು ಪ್ರಸಾರ ಮಾಡಲು ಸ್ಥಾಪಿಸಲಾದ ಟ್ರಾನ್ಸ್‌ಪಾಂಡರ್‌ಗಳು ಮತ್ತು ನಭಮಿತ್ರ ಅಪ್ಲಿಕೇಶನ್‌ನ ಬಳಸಬೇಕೆಂದು ಹೇಳಿದೆ.
ರಾತ್ರಿಯಲ್ಲಿ ಅಥವಾ ಲಂಗರು ಹಾಕುವಾಗ ಮೀನುಗಾರರು ತಮ್ಮ ನ್ಯಾವಿಗೇಷನಲ್ ದೀಪಗಳನ್ನು ಆನ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕರಾವಳಿ ಭದ್ರತಾ ಪಡೆಗಳ ತಪಾಸಣೆಯ ಸಂದರ್ಭದಲ್ಲಿ ಎಲ್ಲ ಮೀನುಗಾರರಿಂದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ. ಅವರು ಎಲ್ಲ ಸಮಯದಲ್ಲೂ ಕ್ಯೂಆರ್-ಕೋಡೆಡ್ ಆಧಾರ್ ಕಾರ್ಡ್, ನೋಂದಣಿ ಪ್ರಮಾಣಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇತರ ಅಗತ್ಯ ದಾಖಲೆಗಳನ್ನು ಕೊಂಡೊಯ್ಯಲು ಸೂಚಿಸಲಾಗಿದೆ.