ಬೆಳ್ತಂಗಡಿ: ಒಂದೆಡೆ ಆರ್ಥಿಕ ಸಮಸ್ಯೆ, ಇನ್ನೊಂದೆಡೆ ಅನಾರೋಗ್ಯದಿಂದಾಗಿ ನಿದ್ರೆ ಮಾತ್ರೆ ಸೇವಿಸಿದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಮುಂಡಾಜೆಯಲ್ಲಿ ನಡೆದಿದೆ.
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (96) ಮೃತಪಟ್ಟವರು. ಪುತ್ರ ಖ್ಯಾತ ಜನಪದ ಕಲಾವಿದ,, ಶಿಕ್ಷಕ ಜಯರಾಂ, (58) ಅವರು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಯಾಣಿ ಮತ್ತು ಜಯರಾಂ ಅವರ ಕೂಳೂರಿನ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಿ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ನಿದ್ರೆಯಲ್ಲಿರುವುದು ಕಂಡು ಬಂದಿದೆ. ತಕ್ಷಣ
ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಿಗಾ ಘಟಕದಲ್ಲಿದ್ದ ತಾಯಿ ಕಲ್ಯಾಣಿ ಅವರು ಮೇ 12ರಂದು ಸಂಜೆ ಕೊನೆಯುಸಿರೆಳೆದರು. ಮಗ ಜಯರಾಂ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಯಿ ಮಲಗಿದ ಜಾಗದಲ್ಲಿ ಜಯರಾಂ ಅವರು ಬರೆದಿರುವ ನಾಲ್ಕು ಪುಟ ಗಳ ಪತ್ರ ಲಭಿಸಿದ್ದು ಅದರಲ್ಲಿ ಸಾಲದ ಸಮಸ್ಯೆ ತನ್ನ ಅನಾರೋಗ್ಯದ ಕಾರಣ ದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ. ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅವರ ಆರೈಕೆಯನ್ನು ಮಗನೇ ಮಾಡುತ್ತಿದ್ದರು.
ಆದ್ದರಿಂದ ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ನಾವಿಬ್ಬರೂ ಜತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ ಎನ್ನಲಾಗಿದೆ. ತಾಯಿಗೆ ಅವರು ಮೊದಲು ಮಾತ್ರೆ ನೀಡಿ ಬಳಿಕ ಪುತ್ರ ಮಾತ್ರೆ ಸೇವಿಸಿದರೆ ಅಥವಾ ಇಬ್ಬರೂ ಜತೆಗೆ ಮಾತ್ರೆ ಸೇವಿಸಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.
ಜಯರಾಂ ಅವರು ಕಲಾವಿದರಾಗಿ, ನಾಟಕ ರಚನೆಕಾರ ರಾಗಿ, ಜಾನಪದ ಕಲಾರಾಧಕರಾಗಿ, ಚಿತ್ರಕಲಾ ಶಿಕ್ಷಕರಾಗಿ ರಾಜ್ಯಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದ ಅವರು 26 ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಶನ್ ಸೆಂಟರ್ ನಡೆಸುತ್ತಿದ್ದರು