ಕಡಬ: ಮೇ 12 ರಿಂದ 16 ರ ತನಕ ನಡೆಯುವ ತಾಲೂಕಿನ ಆರೇಲ್ತಡಿ ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಸಮಾಜದ ಜನರ ಮನಸ್ಸು ಒಂದಾಗುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಆಗಿದೆ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಿ ಪ್ರೀತಿಯೊಟ್ಟಿಗೆ ಕಾಲ ಕಾಲಕ್ಕೆ ಬರುವ ನಲ್ಮೆ ಗೆಲ್ಮೆ, ಮನಸ್ಸಿಗೆ ತನ್ಮಯ ನೀಡುವ, ಆ ಕಾಲದಲ್ಲಿ ಪ್ರಾಣಿ, ಸಂಕುಲಗಳಿಗೆ ತೊಡಕಾದಾಗ ಕಾಪಾಡುವ ಧರ್ಮಭೂಮಿಯಾಗಿ ಆರೇಲ್ತಡಿ ಬೆಳೆದಿದೆ. ಸಮಾಜದ ಜನರ ಮನಸ್ಸು ಒಂದಾಗುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಆಗಿದೆ. ಊರಿನವರು ಒಟ್ಟಾಗಿ ನಂಬಿಕೊಂಡು ಬಂದಾಗ ಯಶಸ್ಸು ಸಾಧ್ಯ. ಗ್ರಾಮೀಣ ಭಾಗದ ಈ ಮಣ್ಣಿನಲ್ಲಿ ಆದ ಕಾರ್ಯ ಇಡೀ ಜಗತ್ತಿಗೆ ಪಸರಿಸುವ ಕೆಲಸ ಆಗಿದೆ ಎಂದ ಸ್ವಾಮೀಜಿಗಳು, ಹಿಂದೂ ಸಮಾಜ ಒಗ್ಗಟ್ಟಾಗುವ ಅವಶ್ಯಕತೆಯಿದೆ. ಈ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳೋಣ ಎಂದು ನುಡಿದರು.

ಆರೇಲ್ತಡಿ ದೈವಗಳು ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರಿಗೆ ಅಭಿವೃದ್ಧಿಯ ಇಚ್ಛೆ ನೀಡಿದೆ : ನಳಿನ್ ಕುಮಾರ್ ಕಟೀಲ್
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಲ್ಕು ತಿಂಗಳಲ್ಲಿ ಜೀರ್ಣೋದ್ಧಾರಗೊಂಡ ಜಿಲ್ಲೆಯ ಮೊದಲ ದೈವಸ್ಥಾನ ಆರೇಲ್ತಡಿ ಕ್ಷೇತ್ರ. ಯಾವುದೇ ಕ್ಷೇತ್ರದ ಅಭಿವೃದ್ಧಿಯ ಇಚ್ಛೆಯನ್ನು ಆರಾಧ್ಯ ದೈವಗಳು ಮಾಡಬೇಕು. ಅದನ್ನು ದೈವ ಇಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರಿಗೆ ನೀಡಿದೆ. ತುಳುನಾಡಿನ ಪರಂಪರೆ ಶ್ರೇಷ್ಠವಾಗಿದ್ದು, ಕರಾವಳಿಯಲ್ಲಿ ನಾಗ, ದೈವಗಳು ಮೊದಲು ಬಂದಿದ್ದು, ದೇವರು ಮತ್ತೆ ಬಂದದ್ದು. ದೈವ, ದೇವರುಗಳ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಎಲ್ಲರೂ ಸರ್ವಾಂಗೀಣ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದರು.

ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕುವವರು ಕರಾವಳಿಗರು : ಭಾರತಿ ಶೆಟ್ಟಿ
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ನಾಗ, ದೈವಗಳು, ದೇವರುಗಳನ್ನು ನಂಬಿಕೊಂಡು ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕುವವರು ಕರಾವಳಿ ಜನರು. ಹಿಂದೂ ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಿಯವರೆಗೆ ಗಾಳಿ, ಆಕಾಶ, ಭೂಮಿ, ಚಂದ್ರ, ಸೂರ್ಯ ಇರುತ್ತದೋ ಅಲ್ಲಿಯ ವರೆಗೆ ಸನಾತನ ಧರ್ಮ ಇರುತ್ತದೆ ಎಂದ ಅವರು, ಪ್ರಸ್ತುತ ಭಜನಾ ಮಂಡಳಿಗಳಲ್ಲಿ ಮಾತ್ರ ತಾಳದ ಸದ್ದು ಕೇಳುತ್ತದೆ. ಪ್ರತೀ ಮನೆಮನೆಗಳಲ್ಲಿ ಭಜನೆ ನಡೆಯಬೇಕು. ಭಜನೆ ಬದುಕಿಗೆ ಸಂಜೀವಿನಿ ಇದ್ದಂತೆ. ಬದುಕು ಕಲಿಸಿಕೊಡುವ ಭಗವದ್ಗೀತೆಯನ್ನು ಎಲ್ಲರೂ ಪಠಣ ಮಾಡಿ ಎಂದರು.

ಧರ್ಮದ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ: ಭಾಗೀರಥಿ ಮುರುಳ್ಯ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಸಾಧನೆಯಾಗಿದೆ. ಶ್ರಮ ಜಿವಿಗಳನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಕಾರ್ಯ ಆಗಿದೆ. ನಮ್ಮ ಮೊದಲ ಪ್ರಾರ್ಥನೆ ದೈವಗಳಿಗೆ. ದೇವರುಗಳು ದೈವಗಳಿಗೆ ಶಕ್ತಿ ನೀಡಿದ್ದು. ಧರ್ಮ ಉಳಿಯಬೇಕಾದರೆ ಮುಂದಿನ ಜನಾಂಗಕ್ಕೆ ನಮ್ಮ ಧರ್ಮದ ಕುರಿತು ತಿಳಿಹೇಳಬೇಕು. ಭಜನೆಯಿಂದ ವಿಭಜನೆ ಇಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಭಜನೆ ಕುರಿತು ತಿಳಿಹೇಳಬೇಕು. ನಾವು ಒಗ್ಗಟ್ಟಾಗಿ ನಮ್ಮ ಸಂಸ್ಕಾರ, ಸಂಸ್ಕೃತಿ ಉಳಿಸುವ ಕೆಲಸ ಮಾಡುವ ಎಂದರು.
ಸಾವಿರಾರು ಹೃದಯ, ಮನಸ್ಸುಗಳು ಸೇರಿ ಆರೇಲ್ತಡಿ ದೇವಭೂಮಿಯಾಗಿದೆ : ಸಂಜೀವ ಮಠಂದೂರು
ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಾವಿರಾರು ಹೃದಯ, ಮನಸ್ಸುಗಳು ಸೇರಿ ಆರೇಲ್ತಡಿ ದೇವಭೂಮಿಯಾಗಿ ಪರಿವರ್ತನೆಯಾಗಿದೆ. ದೇಶದ ರಕ್ಷಣೆಗಾಗಿ ಸೈನಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಘರ್ಷಗಳು ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಸಂಘರ್ಷಗಳು ನಡೆಯುತ್ತಿವೆ. ರಾಷ್ಟ್ರದ ಉಳಿವಿಗಾಗಿ ಹೋರಾಡುವ ಸೈನಿಕರಿಗೆ, ಧರ್ಮದ ಉಳಿವಿಗಾಗಿ ಹೋರಾಡುವ ಯುವಕರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಸೀತಾರಾಮ ರೈ ಸವಣೂರು ಮಾತನಾಡಿ, ಸಂಘಟನೆ ಮಾಡಿದ ದಿನೇಶ್ ಮೆದು, ರಾಕೇಶ್ ಕೆಡೆಂಜಿ, ಶಿವಪ್ರಸಾದ್ ಶೆಟ್ಟಿ ತಂಡವನ್ನು ಅಭಿನಂದಿಸಿದರು. ಗ್ರಾಮದ ಅಭಿವೃದ್ಧಿಯಲ್ಲಿ ದೈವಸ್ಥಾನಗಳ ಪಾತ್ರ ಮಹತ್ವದ್ದು. ಗ್ರಾಮದ ಎರಡು ಕಣ್ಣು ದೈವಸ್ಥಾನ, ದೇವಸ್ಥಾನಗಳು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರೇಲ್ತಡಿ ದೈವಸ್ಥಾನದ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಸವಣೂರು, ಮುಗೇರು ಎರಡು ಗುತ್ತುಗಳು ಪೂರ್ವಕಾಲದಲ್ಲಿ ಅನ್ಯೋನ್ಯತೆ ಇರುವ ಎರಡು ಗುತ್ತುಗಳು. ಈ ಕ್ಷೇತ್ರದಲ್ಲಿ ಇವತ್ತಿಗೂ ಆರೇಳು ಮರಗಳಿವೆ. ಅದನ್ನು ಉಳಿಸುವ ಪ್ರಯತ್ನ ಸಾಗಬೇಕು. ಪವಿತ್ರವಾದ ಜಾಗ ಇದೀಗ ಪುಣ್ಯ ಕ್ಷೇತ್ರವಾಗಿ ದೈವಗಳು ನೆಲೆಯಾಗಿವೆ. ಹಿಂದೆ ಮುಗೇರು ಮನೆತನದ ಆಡಳಿತದಲ್ಲಿ ನೇಮ ನಡಾವಳಿ ಆಗುತ್ತಿತ್ತು. ಬಳಿಕ ಜೀರ್ಣೋದ್ಧಾರಗೊಂಡು ನೇಮ ನಡಾವಳಿ ಆಗುತ್ತಿತ್ತು. ನಾಲ್ಕು ತಿಂಗಳಲ್ಲಿ ಜೀರ್ಣೋದ್ಧಾರಗೊಂಡಿದೆ. ಇದರ ಹಿಂದೆ ದಿನೇಶ್ ಮೆದು, ರಾಕೇಶ್ ಕೆಡೆಂಜಿ ಅವರ ಶ್ರಮದ ಇದೆ ಎಂದರು.
ಸಮಾರಂಭದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಐದು ಲಕ್ಷ ರೂ. ನೀಡಿದ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ರಸ್ತೆಗೆ ಅನುದಾನ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಮಾಧ್ಯಮ ಸಹಪ್ರಮುಖ್ ಪ್ರಶಾಂತ್ ಕೆಡೆಂಜಿ, ಆರೇಲ್ತಡಿ ದೈವಸ್ಥಾನದ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಜೀರ್ಣೋದ್ದಾರ ಕಾರ್ಯದಲ್ಲಿ ಸಹಕರಿಸಿದ ಪ್ರಕಾಶ ಕುದ್ಮನಮಜಲು, ವಿಜಯ ಕುಮಾರ್ ಕೊಡಿಯಾಲಬೈಲ್ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಸಿಂಡಿಕೇಟ್ ಸದಸ್ಯ ವಿಜಯ ಕುಮಾರ್ ಸೊರಕೆ, ಸವಣೂರು ಹಾಲುತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಬಿಜೆಪಿ ಮಾಧ್ಯಮ ಸಹಸಂಚಾಲಕ ಪ್ರಶಾಂತ್ ಕೆಡೆಂಜಿ, ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ರಾಜೇಂದ್ರ ರೈ ಮಿಜಾರುಗುತ್ತು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು, ರಾಜೇಂದ್ರ ರೈ, ಸೀತಾರಾಮ ರೈ ಸವಣೂರು, ತಾರನಾಥ ಕಾಯರ್ಗ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ಸುಮನ ಮುರಳಿಧರ ಶೆಟ್ಟಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮುಗೇರು ಮೊದಲಾದವರು ಪಾಲ್ಗೊಂಡಿದ್ದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿನೇಶ್ ಮೆದು ಸ್ವಾಮೀಜಿಗಳನ್ನು ಫಲಪುಷ್ಪ ನೀಡಿ ಗೌರವಿಸಿ, ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ರೈ ಮುಗೇರು ವಂದಿಸಿದರು.