ಒಂದೇ ಒಂದು ಗುಂಡು ಹಾರಿದರೆ ಮತ್ತೆ ದಾಳಿ ಎಂದು ಖಡಕ್ ಎಚ್ಚರಿಕೆ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆರಂಭಿಸಿರುವ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ಥಾನದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲದ ಕಾರಣ ಆಪರೇಷನ್ ಸಿಂಧೂರ ಮುಂದುವರಿಯಲಿದೆ. ಮೂರೂ ಸಶಸ್ತ್ರ ಪಡೆಗಳು ಯುದ್ಧ ಸನ್ನದ್ಧತೆಯಲ್ಲಿದ್ದು, ಯಾವುದೇ ಸಂಭಾವ್ಯ ದಾಳಿಯನ್ನು ಎದುರಿಸಲು ಸಮರ್ಥವಾಗಿದ್ದೇವೆ. ಕದನ ವಿರಾಮ ಘೋಷಣೆಯಾಗಿದ್ದರೂ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಇನ್ನೂ ಸಕ್ರಿಯವಾಗಿದೆ ಎಂಬ ಸಂದೇಶವನ್ನು ಭಾರತದ ಸೇನೆ ಪಾಕಿಸ್ಥಾನಕ್ಕೆ ರವಾನಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ಥಾನದೊಂದಿಗೆ ಸಾಮಾನ್ಯ ಸಂಬಂಧ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಭಾರತ, ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿದೆ. ನಮ್ಮ ಯುದ್ಧ ವಿಮಾನಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿವೆ ಎಂದು ಭಾರತೀಯ ವಾಯು ಸೇನೆಯ ಏರ್ ಮಾರ್ಷಲ್ ಎ.ಕೆ ಭಾರ್ತಿ ಅವರ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸುವುದನ್ನು ಭಾರತೀಯ ವಾಯುಸೇನೆ ಮುಂದುವರಿಸುತ್ತದೆ. ಅದೇ ರೀತಿ ಭಾರತೀಯ ಭೂಸೇನೆ ಮತ್ತು ನೌಕಾಸೇನೆ ಕೂಡ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿವೆ. ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಆಪರೇಷನ್ ಸಿಂಧೂರ ಇನ್ನೂ ಸಕ್ರಿಯವಾಗಿದೆ. ಇದು ಜಗತ್ತು ಮತ್ತು ಪಾಕಿಸ್ಥಾನ ಒಪ್ಪಿಕೊಳ್ಳಲೇಬೇಕಾದ ಹೊಸ ವಾಸ್ತವವಾಗಿದೆ. ಸಾಮಾನ್ಯ ಸಂಬಂಧಗಳು ಈ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಭಾರತವು ಕಾಶ್ಮೀರದ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರಳಿ ಪಡೆಯುವುದು ಭಾರತದ ಮುಂದಿರುವ ಗುರಿಯಾಗಿದ್ದು, ಈ ಸಂದರ್ಭದಲ್ಲಿ ಪಾಕಿಸ್ಥಾನದೊಂದಿಗೆ ಯಾವುದೇ ರಾಜತಾಂತ್ರಿಕ ಮಾತುಕತೆಗೆ ಸಿದ್ಧವಿಲ್ಲ ಭಾರ್ತಿ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದದ ಪ್ರಸ್ತಾಪ ಮೊದಲು ಮಾಡಿದ್ದೇ ಪಾಕಿಸ್ಥಾನ. ಆದರೆ ಅದೇ ರಾಷ್ಟ್ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ದಾಳಿ ಮುಂದುವರಿಸಿದೆ. ನಾವು ಭಾರತದ ಗಡಿಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಾಕಿಸ್ಥಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ಪಾಕಿಸ್ಥಾನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದರೆ, ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಭಾರತ ಗಂಭೀರ ಎಚ್ಚರಿಕೆ ನೀಡಿದೆ.