ಶೆಲ್, ಗುಂಡಿನ ದಾಳಿಯಿಲ್ಲದೆ ನೆಮ್ಮದಿಯಾಗಿ ನಿದ್ದೆ ಮಾಡಿದ ಜನ
ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಕಳೆದ 19 ದಿನಗಳಿಂದ ಮೊದಲ ಬಾರಿ ನಿನ್ನೆ ರಾತ್ರಿ ಗಡಿ ಶಾಂತವಾಗಿತ್ತು. ಯುದ್ಧ ಪ್ರಾರಂಭವಾದ ಬಳೀಕ ನಿತ್ಯ ಶೆಲ್ಲಿಂಗ್ ಮತ್ತಿತರ ದಾಳಿ ನಡೆಯುತ್ತಿದ್ದ ಗಡಿಯಲ್ಲಿ ನಿನ್ನೆ ರಾತ್ರಿ ಒಂದೇ ಒಂದು ಗುಂಡು ಹಾರಿಲ್ಲ.
ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಗಡಿ ಪ್ರದೇಶಗಳಲ್ಲಿ ಯಾವುದೇ ಹೊಸ ಘಟನೆಗಳು ಅಥವಾ ಕದನ ವಿರಾಮ ಉಲ್ಲಂಘನೆಗಳು ವರದಿಯಾಗಿಲ್ಲ. ಶಾಂತಿ ನೆಲೆಸಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಹಲವು ದಿನಗಳಲ್ಲಿ ಮೊದಲ ಬಾರಿಗೆ, ಪೂಂಛ್ ಮತ್ತು ರಾಜೌರಿ ಸೇರಿದಂತೆ ಜಮ್ಮು ಪ್ರದೇಶದ ಸ್ಥಳೀಯರು ವಿಮಾನ, ಕ್ಷಿಪಣಿ ದಾಳಿ ಮತ್ತು ಡ್ರೋನ್ ಚಟುವಟಿಕೆಗಳಿಂದ ಮುಕ್ತವಾದ ಶಾಂತಿಯುತ ರಾತ್ರಿಯನ್ನು ಆನಂದಿಸಿದರು. ನಿವಾಸಿಗಳು ತಮ್ಮ ಸಾಮಾನ್ಯ ದಿನಚರಿಗೆ ಮರಳುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸೇರಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಇತರ ಪ್ರದೇಶಗಳಲ್ಲಿ ರಾತ್ರಿ ಶಾಂತಿಯುತವಾಗಿತ್ತು. ಯಾವುದೇ ಘಟನೆ ವರದಿಯಾಗಿಲ್ಲ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಕಳೆದ ಬುಧವಾರ ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿದ್ದ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಗಳನ್ನು ನಡೆಸಿದ ನಂತರ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲ ರೀತಿಯ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಒಪ್ಪಿಕೊಂಡಿದ್ದರು. ಆದರೆ ನಂತರವೂ ಪಾಕಿಸ್ಥಾನ ಸೇನೆಗಡಿಯಲ್ಲಿ ದಾಳಿ ಮಾಡಿತ್ತು. ಇದಕ್ಕೆ ಭಾರತದ ಯೋಧರು ತಕ್ಕ ಪ್ರತ್ಯುತ್ತರ ನೀಡಿದ ಬಳಿಕ ಪಾಕ್ ಹಿಂದೆಗೆದುಕೊಂಡಿದೆ.