ಕಡಬ: ತಾಲೂಕಿನ ಆರೇಲ್ತಡಿ ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ನೇಮೋತ್ಸವ ಮೇ 12 ರಿಂದ 16 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಇಂದು ಬೆಳಿಗ್ಗೆ 9.30 ಕ್ಕೆ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ಸವಣೂರು ಪುದುಬೆಟ್ಟು ಬಸದಿಯ ಮೂಲಕ ದೈವಸ್ಥಾನಕ್ಕೆ ಆಗಮಿಸಿ ಶ್ರೀ ದೈವಸ್ಥಾನಕ್ಕೆ ಸಮರ್ಪಣೆಯಾಯಿತು.
ಸಂಜೆ ಅಲಂಕಾರ ಸೇವೆ, ಸ್ವಚ್ಛತೆ, ತಂತ್ರಿಗಳ ಆಗಮನ, ರಾತ್ರಿ 7 ರಿಂದ ಸಾರ್ವಜನಿಕ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆದು ಬಳಿಕ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಸುಮನ ಮುರಳಿಮೋಹನ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಕಿನಾರ, ಅಧ್ಯಕ್ಷ ದಿನೇಶ್ ಮೆದು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮೇ 13 ಮಂಗಳವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ, ಭಗವತಿ ಸೇವೆ, ಬಿಂಬ ಶುದ್ಧಿ, ಕಲೆಶುದ್ಧಿ, ಅನುಜ್ಞಾಕಲಶ, ಶಯ್ಯಾಪೂಜೆ, ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ, ಶಯ್ಯೆಯಲ್ಲಿ ಪೂಜೆ, ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ ಅಧಿವಾಸ ಹೋಮ, ಕಲಶಪೂಜೆ, ಭಗವತಿ ಸೇವೆ, ಜ್ಞಾನಾಧಿವಾಸ, ಅಧಿವಾಸ ಪೂಜೆ, ಸಂಜೆ 5.30 ರಿಂದ ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಇವರಿಂದ ಗಾನ-ನೃತ್ಯ ಸಂಭ್ರಮ, ರಾತ್ರಿ 7 ಕ್ಕೆ ಸಭಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. 8 ಕ್ಕೆ ಕಲಾಸಂಗಮ ಕಲಾವಿದರಿಂದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ನಾಟಕ ‘ಶಿವದೂತೆ ಗುಳಿಗೆ’ ಪ್ರದರ್ಶನಗೊಳ್ಳಲಿದೆ.
ಮೇ.14 ಬುಧವಾರ ಬೆಳಿಗ್ಗೆ 5 ಕ್ಕೆ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, 6.30 ರಿಂದ 7.03 ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 6 ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 7 ಕ್ಕೆ ದೈವಗಳ ಭಂಡಾರ ತೆಗೆಯುವುದು.
ಮೇ.15 ಗುರುವಾರ ವಾರ್ಷಿಕ ನೇಮೋತ್ಸವದ ಅಂಗವಾಗಿ ಬೆಳಿಗ್ಗೆ 6.30 ಕ್ಕೆ ಶ್ರೀ ಉಳ್ಳಾಕ್ಲು ದೈವದ ನೇಮೋತ್ಸವ, 8 ರಿಂದ ಶ್ರೀ ಕೆಡೆಂಜೊಡಿತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4 ರಿಂದ ಶ್ರೀ ಪಂಜುರ್ಲಿ ಹಾಗೂ ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಮೇ 16 ಶುಕ್ರವಾರ ಸಂಜೆ 6 ಕ್ಕೆ ಮುಗೇರಿನಿಂದ ಗುಳಿಗ ಮಾರಿ ಹೊರಟು, ರಾತ್ರಿ 7 ಕ್ಕೆ ಮಾಂತೂರಿನಲ್ಲಿ ಶಿರಾಡಿ ದೈವದ ನೇಮವಾಗಿ ಸರ್ವೆಯಲ್ಲಿ ಮಾರಿ ಬಿಡುವುದು ನಡೆಯಲಿದೆ ಎಂದು ಶ್ರೀ ದೈವಸ್ಥಾನದ ಪ್ರಕಟಣೆ ತಿಳಿಸಿದೆ.