ನಿರ್ಧಾರ ಪನರ್ ಪರಿಶೀಲಿಸಲು ಬಿಸಿಸಿಐ ಮನವಿ
ಮುಂಬಯಿ: ರೋಹಿತ್ ಶರ್ಮ ಬಳಿಕ ವಿರಾಟ್ ಕೊಹ್ಲಿ ಕೂಡ ಟಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ತನ್ನ ನಿರ್ಧಾರವನ್ನು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದು, ಆದರೆ ಬಿಸಿಸಿಐ ನಿವೃತ್ತಿ ನೀಡಲು ಒಪ್ಪದೆ ನಿರ್ಧಾರ ಪುನಃಪರಿಶೀಲಿಸಲು ಕೇಳಿಕೊಂಡಿದೆ ಎನ್ನಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20ರಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತನ್ನನ್ನು ಆಯ್ಕೆ ಮಾಡಬೇಡಿ. ತಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇತ್ತ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ಕೊಹ್ಲಿಯ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಆದರೆ ವಿರಾಟ್ ಕೊಹ್ಲಿಯ ನಿವೃತ್ತಿಯನ್ನು ಬಿಸಿಸಿಐ ಅಂಗೀಕರಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಯ್ಕೆ ಸಮಿತಿ ಕೊಹ್ಲಿಯಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಒಂದು ವೇಳೆ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದಲ್ಲಿ ಅಚಲವಾಗಿ ನಿಂತರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯೇ ಕೊಹ್ಲಿ ಪಾಲಿಗೆ ಅಂತಿಮ ಸಿರೀಸ್ ಆಗಿರಲಿದೆ. ಇದರ ನಡುವೆ ಬಿಸಿಸಿಐ ಕೊಹ್ಲಿಯ ಮನವೊಲಿಸಲು ಯಶಸ್ವಿಯಾದರೆ, ಅವರು ಟೀಮ್ ಇಂಡಿಯಾ ಪರ ಇಂಗ್ಲೆಂಡ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ವಿರಾಟ್ ಕೊಹ್ಲಿಯೂ ನಿವೃತ್ತರಾದರೆ ಟೆಸ್ಟ್‌ನಲ್ಲಿ ಅನುಭವಿಗಳ ಕೊರತೆ ಕಾಡಲಿದೆ ಎಂಬ ಆತಂಕ ಬಿಸಿಸಿಐಗಿದೆ. ಅಲ್ಲದೆ ವಿರಾಟ್ ಕೊಹ್ಲಿ ಕಣಕ್ಕಿಳಿಯದೇ ನಿವೃತ್ತಿ ಹೊಂದಿದರೆ ಅದರಿಂದ ಕ್ರಿಕೆಟ್ ಪ್ರೇಮಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಕೂಡ ಬಿಸಿಸಿಐಗೆ ಇದೆ. ಹೀಗಾಗಿ ಕೊಹ್ಲಿಯ ಮನವೊಲಿಸಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂದಾಗಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವಿರಾಟ್ ಕೊಹ್ಲಿ ನಿವೃತ್ತಿಯ ಅಂಚಿನಲ್ಲಿರುವುದಂತೂ ಸತ್ಯ. ಆದರೆ ಅದು ಸದ್ಯಕ್ಕೆ ಬೇಡ ಎಂಬುದು ಬಿಸಿಸಿಐನ ನಿರ್ಧಾರ. ಹೀಗಾಗಿ ಕಿಂಗ್ ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸಲಿದ್ದಾರಾ? ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.