ದೆಹಲಿಯತ್ತ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ
ಇಸ್ಲಾಮಾಬಾದ್: ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ಥಾನ ಈಗ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ತುರ್ತು ಸಭೆ ಕರೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ ನ್ಯಾಶನಲ್ ಕಮಾಂಡ್ ಅಥಾರಿಟಿ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಶನಲ್ ಕಮಾಂಡ್ ಅಥಾರಿಟಿ ಪಾಕಿಸ್ಥಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಕಾರ್ಯಾಚರಣೆಯ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಮಾತ್ರ ಈ ಸಭೆಯನ್ನು ಕರೆಯಲಾಗುತ್ತದೆ.
ಭಾರತ ಮತ್ತು ಪಾಕಿಸ್ಥಾನ ಎರಡೂ ಪರಮಾಣು ಬಾಂಬ್ ಹೊಂದಿವೆ. ಭಾರತ ತಾನು ಯಾವತ್ತೂ ಮೊದಲು ಪರಮಾಣು ಅಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂದು ವಿಶ್ವಕ್ಕೆ ಹೇಳಿದೆ. ಆದರೆ ತನ್ನ ಮೇಲೆ ಪ್ರಯೋಗ ಮಾಡಿದರೆ ಪ್ರಯೋಗಿಸುತ್ತೇನೆ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್, ಇರಾನ್ ಯುದ್ಧ ನಡೆದಾಗಲೂ ಪರಮಾಣು ಬಾಂಬ್ ಬಳಸುವ ಬಗ್ಗೆ ಬಹಳಷ್ಟು ಸುದ್ದಿಗಳು ಪ್ರಕಟವಾಗಿದ್ದವು. ಆದರೆ ಯಾರೂ ಅಣು ಬಾಂಬ್ ಪ್ರಯೋಗಿಸುವ ಧೈರ್ಯ ಮಾಡಿರಲಿಲ್ಲ. ಒಂದು ವೇಳೆ ಯಾವುದಾದರೂ ದೇಶ ಪರಮಾಣು ಬಾಂಬ್ ಬಳಸಿದರೆ ಆ ದೇಶದ ಜೊತೆ ವಿಶ್ವವೇ ಆರ್ಥಿಕ ಸಂಬಂಧವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ಬಳಿಕ ಇಲ್ಲಿಯವರೆಗೆ ಯಾವುದೇ ದೇಶ ಪರಮಾಣು ಅಸ್ತ್ರವನ್ನು ಬಳಸಿಲ್ಲ.
ಪಾಕಿಸ್ಥಾನ ಭಾರತದ ವಿರುದ್ಧ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ದೆಹಲಿಯನ್ನು ಗುರಿಯಾಗಿಸಿ ಪಾಕಿಸ್ಥಾನ ಫತಾಹ್-II ಕ್ಷಿಪಣಿ ಉಡಾವಣೆ ಮಾಡಿತ್ತು. ಆದರೆ ಭಾರತ ಈ ಕ್ಷಿಪಣಿಯನ್ನು ಆಕಾಶದಲ್ಲೇ ಛಿದ್ರಗೊಳಿಸಿದೆ. ಹರ್ಯಾಣದ ಸಿರ್ಸಾದಲ್ಲಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಧ್ವಂಸಗೊಳಿಸಿದೆ. ಪಾಕಿಸ್ತಾನದ ಫತಾಹ್-II ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು ಅಂದಾಜು 400 ಕಿಲೋಮೀಟರ್ ದೂರವನ್ನು ಕ್ರಮಿಸುವ ಜೊತೆಗೆ 365 ಕಿಲೋ ಗ್ರಾಂ ಸಿಡಿತಲೆಯನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ. ಕ್ರೂಸ್ ಕ್ಷಿಪಣಿ ಶಬ್ದದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ದದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ದದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರಾಡಾರ್ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.