ಪಾಕಿಸ್ಥಾನದ 5 ವಾಯುನೆಲೆ, 2 ರಾಡಾರ್‌ ಬೇಸ್‌ ಧ್ವಂಸ : ರಕ್ಷಣಾ ಇಲಾಖೆ ಮಾಹಿತಿ

ಸುಳ್ಳು ಸುದ್ದಿ ಹರಡಿ ಗೊಂದಲ ಸೃಷ್ಟಿಸಲು ಪಾಕ್‌ ಕುತಂತ್ರ ಎಂದ ಸ್ಪಷ್ಟನೆ

ನವದೆಹಲಿ : ಇದುವರೆಗಿನ ಯುದ್ಧದಲ್ಲಿ ಪಾಕಿಸ್ಥಾನದ 5 ವಾಯುನೆಲೆಗಳನ್ನು ಹಾಗೂ 2 ರಾಡಾರ್ ಬೇಸ್​ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಪಾಕಿಸ್ಥಾನದ ಸುದ್ದಿಗಳು ಸುಳ್ಳು. ಭಾರತದ ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ. ಆದರೆ, ಪಾಕಿಸ್ಥನವು ನಾಗರಿಕರನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿವೆ. ಪಾಕಿಸ್ಥಾನದ ಎಲ್ಲ ದಾಳಿಗಳನ್ನು ತಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೇನೆ ಮಾಹಿತಿ ನೀಡಿದೆ.

ದಾಳಿ ಮತ್ತು ಪ್ರತಿ ದಾಳಿ ತೀವ್ರಗೊಂಡಿರುವ ಸಂದರ್ಭದಲ್ಲೇ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿಯೂ ಪಾಕಿಸ್ಥಾನದ ಕಡೆಯಿಂದ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ದುರುದ್ದೇಶದಿಂದ ಅನೇಕ ಸುಳ್ಳಿನ ಸರಮಾಲೆಯನ್ನೇ ಹರಿಯಬಿಡಲಾಗುತ್ತಿದೆ. ಅವುಗಳಿಗೆಲ್ಲ ಭಾರತ ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆಗಳು ತೆರೆ ಎಳೆದಿವೆ. ಪಾಕ್ ವಿರುದ್ಧದ ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಈವರೆಗೆ ನಡೆದ ವಿದ್ಯಮಾನಗಳ ಬಗ್ಗೆ ಉಭಯ ಇಲಾಖೆಗಳು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದವು.

















































 
 

ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ದಾಳಿ ಸಂಬಂಧ ಮಾಹಿತಿ ನೀಡಿದ ನಂತರ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿವರವಾದ ಮಾಹಿತಿ ನೀಡಿದರು. ಪಾಕ್ ಸುಳ್ಳುಗಳನ್ನು ಬಯಲಿಗೆಳೆದರು.

ಪಾಕಿಸ್ಥಾನ ವಿರುದ್ಧದ ಸೇನಾ ಕಾರ್ಯಾಚರಣೆಗೆ ಭಾರತ ಸರ್ಕಾರದ ವಿರುದ್ಧ ಸ್ವದೇಶದಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ ಎಂಬ ಶತ್ರು ರಾಷ್ಟ್ರದ ಆರೋಪಗಳಿಗೆ ಮಿಸ್ರಿ ತಿರುಗೇಟು ನೀಡಿದರು. ನಮ್ಮದು ಪಾಕಿಸ್ಥಾನದ ರೀತಿಯ ದೇಶವಲ್ಲ. ಜಗತ್ತಿನಲ್ಲೇ ಬಲುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತೇವೆ. ಆದಾಗ್ಯೂ ಭಯೋತ್ಪಾದಕರ ಪೋಷಕ ಪಾಕಿಸ್ಥಾನದ ವಿರುದ್ಧದ ಕಾರ್ಯಾಚರಣೆಗೆ ನಮ್ಮ ದೇಶದಲ್ಲಿ ವಿರೋಧ ವ್ಯಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಪಾಕಿಸ್ಥಾನದ ದಾಳಿ ಯತ್ನಗಳಿಗೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡುತ್ತಿದೆ ಮತ್ತು ನೀಡಲಿದೆ. ಪಾಕಿಸ್ಥಾನದ ಸೇನಾ ಸೆಂಟರ್​ ಮೇಲೆಯೂ ದಾಳಿ ಮಾಡಲಾಗಿದೆ ಎಂದು ಮಿಸ್ರಿ ತಿಳಿಸಿದರು.

ಭಾರತದ 26 ಸ್ಥಳಗಳ ಮೇಲೆ ಪಾಕಿಸ್ಥಾನದ ಕ್ಷಿಪಣಿ ದಾಳಿಗೆ ಪ್ರಯತ್ನಿಸಿತ್ತು. ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಅದನ್ನು ತಡೆದು, ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಸೋಫಿಯಾ ಖುರೇಷಿ ತಿಳಿಸಿದರು. ಉದಮ್‌ಪುರ, ಭುಜ್, ಬಟಿಂಡಾ, ಪಠಾಣ್‌ಕೋಟ್ ಸೇರಿದಂತೆ 5 ಸ್ಥಳಗಳಲ್ಲಿ ಉಪಕರಣಗಳಿಗೆ ಸ್ವಲ್ಪ ಹಾನಿಯಾಗಿದೆ ಎಂದು ಅವರು ಹೇಳಿದರು.

ಶ್ರೀನಗರ, ಅವಂತಿಪುರದಲ್ಲಿ ಆಸ್ಪತ್ರೆ, ಶಾಲೆಯನ್ನು ಗುರಿಯಾಗಿಸಿ ದಾಳಿ ನಡೆದಿದ್ದು, ಅದನ್ನು ಹಿಮ್ಮೆಟ್ಟಿಸಿದ್ದೇವೆ. ಪಾಕಿಸ್ಥಾನ ವಾಯು ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಹೇಳಿದರು. ಭಾರತ ಉದ್ವಿಗ್ನತೆಯನ್ನು ಬಯಸುವುದಿಲ್ಲ, ಹಾಗೆಂದು ದಾಳಿ ಮಾಡಿದಾಗ ಸುಮ್ಮನಿರುವುದೂ ಇಲ್ಲ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top