ಗಡಿಭಾಗದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತ
ನವದೆಹಲಿ : ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 15ರ ಬೆಳಗ್ಗೆ 5.29ರವರೆಗೆ ದೇಶಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಸರಕಾರ ಆದೇಶಿಸಿದೆ. ಪಾಕಿಸ್ಥಾನ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ಹೇಳಿದೆ. ಈ ಹಿಂದೆ ಮೇ 10ರ ವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ತೀರ್ಮಾನ ಘೋಷಿಸಲಾಗಿತ್ತು. ಇದೀಗ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಮೇ 15ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಪಂಜಾಬ್‌ನ ಅಮೃತಸರ, ಲುಧಿಯಾನ, ಪಟಿಯಾಲ, ಬಟಿಂಡಾ, ಹಲ್ವಾರಾ ಮತ್ತು ಪಠಾಣ್‌ಕೋಟ್, ಹಿಮಾಚಲ ಪ್ರದೇಶದ ಭುಂತರ್, ಶಿಮ್ಲಾ ಮತ್ತು ಕಾಂಗ್ರಾ-ಗಗ್ಗಲ್, ಕೇಂದ್ರಾಡಳಿತ ಪ್ರದೇಶದ ಚಂಡೀಗಢ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು, ಲಡಾಖ್‌ನ ಲೇಹ್, ರಾಜಸ್ಥಾನದ ಕಿಶೆಂಗಢ, ಜೈಸಲ್ಮೇರ್, ಜೋಧ್‌ಪುರ ಮತ್ತು ಬಿಕಾನೇರ್ ಮತ್ತು ಗುಜರಾತ್‌ನ ಮುಂದ್ರ, ಜಾಮ್‌ನಗರ, ಹಿರಾಸರ್, ಪೋರ್ಬಂದರ್, ಕೇಶೋಡ್, ಕಾಂಡ್ಲಾ ಮತ್ತು ಭುಜ್ ಮತ್ತಿತರ ವಿಮಾನ ನಿಲ್ದಾಣಗಳು ಮುಚ್ಚಲ್ಪಡುತ್ತವೆ.
ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವಾರು ವಿಮಾನ ಯಾನ ಸಂಸ್ಥೆಗಳು ವಿಮಾನ ನಿಲ್ದಾಣಗಳು ಮುಚ್ಚುರುವ ಹಿನ್ನೆಲೆಯಲ್ಲಿ ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿವೆ. ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಭದ್ರತಾ ಪರಿಸ್ಥಿತಿಯು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿದೆ. ಅಲ್ಲಿ ಶುಕ್ರವಾರ 100ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.